ಸಕ್ರೇಬೈಲು : ಶಿವಮೊಗ್ಗ ಜಿಲ್ಲೆಯ ಪ್ರವಾಸಿ ತಾಣಗಳಿಗೆ ಭೇಟಿ ನೀಡಲಿಚ್ಚಿಸುವ ಪ್ರವಾಸಿಗರಿಗೆ ವಿಶೇಷವಾಗಿ ಜಲಕ್ರೀಡೆ ಮತ್ತು ಸಾಹಸ ಚಟುವಟಿಕೆಗಳಲ್ಲಿ ಭಾಗವಹಿಸುವವರಿಗೆ ಸಕ್ರೆಬೈಲಿನಲ್ಲಿ ಜಂಗಲ್ ಲಾಡ್ಜಸ್ ಅಂಡ್ ರೆಸಾರ್ಟ್ ವತಿಯಿಂದ ಬೋಟಿಂಗ್ ಸ್ಪೋರ್ಟ್ಸನ್ನ ಆರಂಭಿಸಲಾಗಿದೆ. ಸಂಸದ ಬಿ.ವೈ.ರಾಘವೇಂದ್ರ ಬೋಟಿಂಗ್ ವ್ಯವಸ್ಥೆಗೆ ಚಾಲನೆ ನೀಡಿದರು. ಇದರಿಂದಾಗಿ ಸಕ್ರೆಬೈಲಿನ ಆನೆ ಬಿಡಾರದ ಜೊತೆಗೆ ಇಲ್ಲಿನ ಹಿನ್ನೀರಿನ ವಿಹಂಗಮ ನೋಟವನ್ನು ಆಸ್ವಾದಿಸುವುದು ಮಾತ್ರವಲ್ಲ ಜಲಕ್ರೀಡೆಗಳಲ್ಲಿ ಭಾಗವಹಿಸಬಹುದಾಗಿದೆ. ಇಲ್ಲಿನ ಸುಂದರ ವಾತಾವರಣ ಮನಮೋಹಕವಾಗಿದ್ದು, ಪ್ರವಾಸಿಗರನ್ನು ಸಂತಸಪಡಿಸಲಿದೆ. ಇಲ್ಲಿನ ಶುದ್ಧ ಗಾಳಿ, ನೀರು, ಕಡಿಮೆ ಜನಜಂಗುಳಿ ವಾತಾವರಣ ಇದೆಲ್ಲವೂ ಪ್ರವಾಸಿಗರನ್ನು ಆಕರ್ಷಿಸಲಿದೆ.
ಬೋಟಿಂಗ್‌ಗೆ ಮೀನುಗಾರರ ವಿರೋಧ
ಸಕ್ರೆಬೈಲ್‌ನಲ್ಲಿ ಬೋಟಿಂಗ್‌ಗೆ ಉದ್ಘಾಟನೆ ವೇಳೆಯೇ ಅದಕ್ಕೆ ವಿರೋಧ ವ್ಯಕ್ತವಾಗಿದೆ. ಗಂಗಾ ಪರಮೇಶ್ವರಿ ಮೀನುಗಾರರ ಸಹಕಾರ ಸಂಘ ಬೋಟಿಂಗ್‌ಗೆ ವಿರೋಧ ವ್ಯಕ್ತಪಡಿಸಿದೆ. ತುಂಗಾ ನದಿ ಹಿನ್ನೀರಿನಲ್ಲಿ ಬೋಟಿಂಗ್ ವ್ಯವಸ್ಥೆ ಮಾಡುವುದರಿಂದ ಬಲೆಗಳಿಗೆ ಹಾನಿಯಾಗುವ ಸಾಧ್ಯತೆಯಿದೆ. ಇದರಿಂದಾಗಿ ನೂರಾರು ಮೀನುಗಾರರ ಕುಟುಂಬ ಬೀದಿ ಪಾಲಾಗುವ ಆತಂಕವಿದೆ. ಹೀಗಾಗಿ ಕೂಡಲೆ ಸಂಸದರ ಈ ಕುರಿತು ಕ್ರಮ ಕೈಗೊಳ್ಳಬೇಕು ಎಂದು ಬೋಟಿಂಗ್ ಉದ್ಘಾಟನೆ ಮಾಡಲು ಬಂದಿದ್ದ ಸಂಸದರಿಗೆ ಮನವಿ ಮಾಡಲಾಗಿದೆ.
ಸಂಸದ ಬಿ.ವೈ.ರಾಘವೇಂದ್ರ ತಲೆಗೆ ಪೆಟ್ಟು
ಸಕ್ರೇಬೈಲಿನಲ್ಲಿ ಬೋಟಿಂಗ್ ಆರಂಭದ ಉದ್ಘಾಟನಾ ಕಾರ್ಯಕ್ರಮಕ್ಕೆ ತೆರಳಿದ್ದ ಸಂಸದ ಬಿ.ವೈ.ರಾಘವೇಂದ್ರ ತಲೆಗೆ ಪೆಟ್ಟು ಬಿದ್ದಿದೆ. ಬೋಟ್‌ನಿಂದ ಕೆಳೆಗೆ ಇಳಿಯುವ ವೇಳೆ ಬೋಟ್‌ನಲ್ಲಿದ್ದ ಮೊಳೆ ರೀತಿಯ ಸ್ಕ್ರೂ ಒಂದು ರಾಘವೇಂದ್ರ ಅವರ ತಲೆಗೆ ತಾಗಿದೆ. ಪರಿಣಾಮವಾಗಿ ಸಂಸದರ ತಲೆಗೆ ಗಾಯವಾಗಿದ್ದು ಕೂಡಲೇ ಪ್ರಾಥಮಿಕ ಚಿಕಿತ್ಸೆಯನ್ನು ಪಡೆದುಕೊಂಡಿದ್ದಾರೆ.