ಶಿವಮೊಗ್ಗ : ಅತ್ಯಾಚಾರ ವಿಚಾರದ ಕುರಿತಾಗಿ ಲಘುವಾಗಿ ಮಾತನಾಡಿರುವ ಶಾಸಕ ರಮೇಶ್‌ಕುಮಾರ್ ಹೇಳಿಕೆಯನ್ನ ಬಿಜೆಪಿ ಮಹಿಳಾ ಮೋರ್ಚಾ ಖಂಡಿಸಿದೆ. ಈ ಹಿನ್ನೆಲೆಯಲ್ಲಿ ಪ್ರತಿಭಟನೆ ನಡಿಸಿದ ಬಿಜೆಪಿ ಮಹಿಳಾ ಮೋರ್ಚಾ ರಮೇಶ್ ಕುಮಾರ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಜಿಲ್ಲಾಧಿಕಾರಿ ಮುಖಾಂತರ ಪತ್ರ ಬರೆದಿದ್ದಾರೆ.
ಸ್ತ್ರೀ ಪರವಾದ ಧ್ವನಿ ಎತ್ತಲು ಚುನಾಯಿತ ಪ್ರತಿನಿಧಿಗಳನ್ನು ಆಯ್ಕೆ ಮಾಡಲಾಗಿರುತ್ತದೆ, ಆದರೆ, ರಮೇಶ್ ಕುಮಾರ್‌ರಂತವರು ಈ ರೀತಿಯ ಅಸಹ್ಯ ಹುಟ್ಟಿಸುವಂತಹ ಹೇಳಿಕೆಯನ್ನು ನೀಡಿ ಸ್ತ್ರೀ ಕುಲಕ್ಕೆ ಹಾಗೂ ಪ್ರಜಾಪ್ರಭುತ್ವದ ದೇವಾಲಯವಾದ ಸದನವನ್ನು ಅಪಮಾನ ಮಾಡಿರುತ್ತಾರೆ. ಸ್ತ್ರೀದ್ವೇಷಿಗಳು ಮತ್ತು ಮಹಿಳೆಯರ ಬಗ್ಗೆ ಕ್ರೂರ ಮನಸ್ಥಿತಿ ಉಳ್ಳಂತಹ ಜನ ಪ್ರತಿನಿಧಿಗಳು ಇನ್ನೂ ಕೂಡಾ ಇದ್ದಾರೆ ಎಂಬುದೇ ಅತ್ಯಂತ ಬೇಸರ ಮತ್ತು ದುರಾದೃಷ್ಟಕರ, ಅತ್ಯಾಚಾರ ಕುರಿತು ರಮೇಶ್ ಕುಮಾರ್ ಹೇಳಿಕೆ ನೀಡುತ್ತಿರುವುದು ಇದೇ ಮೊದಲೇನಲ್ಲ. ಈ ಹಿಂದೆ ಗೌರವಯುತವಾದ ಸಭಾಧ್ಯಕ್ಷ ಸ್ಥಾನದಲ್ಲಿ ಕುಳಿತಿದ್ದಾಗಲೇ ಸಭಾಧ್ಯಕ್ಷನಾಗಿ ತಾನು ಅತ್ಯಾಚಾರಗೊಳಪಟ್ಟ ಸಂತ್ರಸ್ತೆಯಂತಾಗಿದ್ದೇನೆ ಎಂದು ಹೇಳಿಕೆ ನೀಡಿದ್ದರು. ಈ ಹೇಳಿಕೆಯನ್ನು ಸರ್ವ ಪಕ್ಷದ ಮಹಿಳಾ ಶಾಸಕರು ತೀವ್ರ ಖಂಡನೆ ವ್ಯಕ್ತಪಡಿಸಿದ್ದರು. ಇದೀಗ ಮತ್ತೊಮ್ಮೆ ಮೈಮರೆತು ಅಧಿವೇಶನದಲ್ಲಿಯೇ ಮಾತನಾಡಿದ್ದಾರೆ ಎಂದು ಪ್ರತಿಭಟನಕಾರರು ಆಕ್ರೋಶ ವ್ಯಕ್ತಪಡಿಸಿದರು.