ಶಿವಮೊಗ್ಗ : ಬೆತ್ತಲೆ ರಾಜಕಾರಣ ಮಾಡಿಕೊಂಡಿರವವರ ಎದುರಿಗೆ ಚಡ್ಡಿ ಹಾಕಿಕೊಂಡಿರುವವರನ್ನು ನೋಡಿದರೆ ಬಹಳ ಅಸೂಯೆ, ಸಂಕಟವಾಗುತ್ತದೆ. ಈ ವಿಚಾರವಾಗಿ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಮೇಲೆ ನನಗೆ ಅನುಕಂಪ ಇದೆ ಎಂದು ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ವ್ಯಂಗ್ಯವಾಡಿದ್ದಾರೆ.
ಆರ್‌ಎಸ್‌ಎಸ್ ಚಡ್ಡಿ ಸುಡುವ ವಿಚಾರವಾಗಿ ಸಿದ್ದರಾಮಯ್ಯ ನೀಡಿರುವ ಹೇಳಿಕೆಗೆ ಪ್ರತಿಕ್ರೆಯೆ ನೀಡಿದ ಅವರು, ಸಿದ್ದರಾಮಯ್ಯ ಅವರ ಹೋರಾಟದ ಸ್ಟ್ಯಾಂಡರ್ಡ್ ಬಹಳ ಕೆಳ ಮಟ್ಟಕ್ಕೆ ಇಳಿದಿದೆ. ಇದನ್ನು ಬಿಟ್ಟು ಸಿದ್ದರಾಮಯ್ಯನಂತವರು ಸೈದ್ದಾಂತಿಕ, ಸಂಘಟನಾತ್ಮ ಹೋರಾಟಕ್ಕೆ ಬರಬೇಕು. ಇನ್ನು ಕೆಳಮಟ್ಟದ ರಾಜಕಾರಣವನ್ನು ಮಾಡಬೇಡಿ ಎಂದು ಕಾಲೆಳೆದರು.
ಇನ್ನು ಇತ್ತಿಚೆಗೆ ರಾಜಕಾರಣಿಗಳು ಬಳಸುತ್ತಿರುವ ಭಾಷೆಯ ಕುರಿತಾಗಿ ಚಾಟಿ ಬೀಸಿರುವ ಆಯನೂರು ಮಂಜುನಾಥ್, ರಾಜಕಾರಣಿಗಳಿಗೆ ಸಂಯಮ, ಲಜ್ಜೆ ಇರಬೇಕು. ಜನರ ಪ್ರತಿನಿಧಿಯಾಗಿ ಮಾತನಾಡುವಾಗ ಎಚ್ಚರಿಕೆ ಇರಬೇಕು. ರಾಜಕೀಯದಲ್ಲಿ ಎಲ್ಲರು ಕೂಡ ಈ ವಿಚಾರವಾಗಿ ಪರಸ್ಪರ ನೀತಿ ಸಂಹಿತೆಯನ್ನು ಅಳವಡಿಸಿಕೊಳ್ಳಬೇಕು. ಆಗ ಸಾರ್ವಜನಿಕ ಭಾಷೆ ಸಭ್ಯವಾಗಿರುತ್ತದೆ ಎಂದು ಪರೋಕ್ಷವಾಗಿ ಕೆ.ಎಸ್.ಈಶ್ವರಪ್ಪ ಹಾಗೂ ಎಲ್ಲಾ ರಾಜಕಾರಣಿಗಳಿಗೂ ಕಿವಿ ಮಾತು ಹೇಳಿದ್ದಾರೆ.