ಬೆಂಗಳೂರು : ಶಿವಮೊಗ್ಗ ಜಿಲ್ಲೆಯಲ್ಲಿ 10 ಎಕರೆ ತೋಟ ಇರುವವರು, ವರ್ತಕರು ಕೂಡ ಕೃಷಿ ಕಾರ್ಮಿಕರಾಗಿ ನೋಂದಣಿ ಮಾಡಿಕೊಂಡಿದ್ದಾರೆ ಎಂದು ಅಧಿವೇಶನದಲ್ಲಿ ಶಾಸಕ ಕೆ.ಬಿ.ಅಶೋಕ್‌ನಾಯ್ಕ್ ಆರೋಪಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿದ ಕಾರ್ಮಿಕ ಸಚಿವ ಅರಬೈಲು ಹೆಬ್ಬಾರ್ ಶಿವರಾಂ, ಈ ರೀತಿಯ ಪ್ರಕರಣಗಳು ಸರ್ಕಾರ ಹಾಗೂ ಇಲಾಖೆಯ ಗಮನಕ್ಕೆ ಬಂದಿದೆ. ಈ ಕುರಿತು ತನಿಖೆ ಕೈಗೊಳ್ಳಲಾಗಿದೆ. ಹಾಗೂ ಅನೇಕ ಕಾರ್ಡುಗಳನ್ನ ರದ್ದುಗೊಳಿಸಲಾಗಿದೆ. ಇಂತವರ ಮೇಲೆ ಸೂಕ್ತ ಕ್ರಮವನ್ನು ತೆಗೆದುಕೊಳ್ಳಲಾಗುವುದು ಎಂದರು.
ಈ ಬಗ್ಗೆ ಸದನದಲ್ಲಿ ಪ್ರಶ್ನೆ ಕೇಳಿದ್ದ ಶಾಸಕ ಆಶೋಕ್ ನಾಯಕ್ ಶಿವಮೊಗ್ಗ ಜಿಲ್ಲೆಯಲ್ಲಿ ಒಟ್ಟು ಕಟ್ಟಡ ಕಾರ್ಮಿಕರು ಸೇರಿದಂತೆ ಇತರ ಕಾರ್ಮಿಕರ ಸಂಖ್ಯೆ ಎಷ್ಟಿದೆ?. ಹಾಗೆಯೇ ಅದರಲ್ಲಿ ಮಹಿಳಾ ಕಾರ್ಮಿಕರೆಷ್ಟು?, ಪುರುಷ ಕಾರ್ಮಿಕರೆಷ್ಟು? ಎಂದು ಪ್ರಶ್ನೆಯಲ್ಲಿ ಉಲ್ಲೇಖಿಸಿದ್ದರು. ಜಿಲ್ಲೆಯಲ್ಲಿ ಒಟ್ಟು ೧ ಲಕ್ಷದ ೪೪ ಸಾವಿರದ ೪೨೪ ಜನ ಕಟ್ಟಡ ಕಾರ್ಮಿಕರು ಮತ್ತು ಇತರ ನಿರ್ಮಾಣ ಕಾರ್ಮಿಕರು ಮಂಡಳಿಯ ಕಾರ್ಮಿಕ ಫಲಾನುಭವಿಗಳಾಗಿ ನೋಂದಣಿ ಮಾಡಿಕೊಂಡಿದ್ದಾರೆ. ಇದರಲ್ಲಿ ೯೮ ಸಾವಿರದ ೯೦೭ ಪುರುಷ ಹಾಗೂ ೪೫ ಸಾವಿರದ ೫೧೭ ಮಹಿಳಾ ಕಾರ್ಮಿಕರಿದ್ದಾರೆ ಎಂದು ಕಾರ್ಮಿಕ ಸಚಿವರು ಲಿಖಿತ ಉತ್ತರ ನೀಡಿದ್ದಾರೆ.