ಸಚಿವ ಆರ್.ಅಶೋಕ್ ಹೇಳಿಕೆಗೆ ಖಂಡನೆ... ಏನದು?

ಶಿವಮೊಗ್ಗ: ಕಂದಾಯ ಸಚಿವ ಆರ್.ಅಶೋಕ್ ಸೊಪ್ಪಿನ ಬೆಟ್ಟ ಹಾಗೂ ಕಾನು ಅನಧಿಕೃತ ಸಾಗುವಳಿ ಮಂಜುರಾತಿಗೆ ಅವಕಾಶವಿಲ್ಲ ಎಂದು ನೀಡಿರುವ ಹೇಳಿಕೆಯನ್ನು ಶಿವಮೊಗ್ಗ ಜಿಲ್ಲಾ ಅಡಿಕೆ ಬೆಳೆಗಾರರ ಸಂಘ ಖಂಡಿಸಿದೆ.

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಡಿಕೆ ಬೆಳೆಗಾರರ ಸಂಘದ ರಮೇಶ್ ಹೆಗಡೆ, ಶಿವಮೊಗ್ಗ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಕೊಡಗು ಹಾಗೂ ಹೈದರಾಬಾದ್ ಕರ್ನಾಟಕ ಭಾಗದ ವಿಶೇಷ ಹಕ್ಕುಳ್ಳ ಭೂಮಿಗಳಾದ ಸೊಪ್ಪಿನ ಬೆಟ್ಟ, ಕಾನು, ಕುಮ್ಕಿ, ಬೆಟ್ಟ ಭೂಮಿ ಹಾಗೂ ತರಿ ಭೂಮಿಗಳ ಅನಧಿಕೃತ ಸಾಗುವಳಿ ಸಕ್ರಮ ಹಾಗೂ ಮಂಜುರಾತಿಗೆ ಅವಕಾಶವಿಲ್ಲವೆಂದು ಸಚಿವರು ನೀಡಿರುವ ಹೇಳಿಕೆ ಖಂಡನೀಯ. ಇದರಿಂದ ಸಾವಿರಾರು ಜನ ಬಗರ್‌ಹುಕುಂ ಸಾಗುವಳಿದಾರರು ತಮ್ಮ ಬದುಕಿಗಾಗಿ ಮಾಡಿಕೊಂಡಿರುವ ಸಾಗುವಳಿ ಭೂಮಿ ಹಾಗೂ ಹಕ್ಕನ್ನು ಕಳೆದುಕೊಂಡು ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ. ಅಲ್ಲದೆ ಭೂಮಿ ಕಳೆದುಕೊಂಡು ನಿರ್ಗತಿಕರಾಗಲಿದ್ದಾರೆ ಎಂದು ಕಿಡಿಕಾರಿದ್ರು.