ಅಂಗನವಾಡಿ ನೌಕರರ ಗೋಳು ಕೇಳೋರು ಯಾರು..? 

ಬೆಂಗಳೂರು : ಇವತ್ತು, ನಾಳೆ ಅಂತ ಮೂರು ತಿಂಗಳಾಯ್ತು. ಅಂಗನವಾಡಿ ಕಾರ್ಯಕರ್ತೆಯರು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಿಬ್ಬಂದಿಗೆ ಸಂಬಳವೇ ಆಗಿಲ್ಲ. ಹಾಗಾದ್ರೆ ಸಂಬಳ ಯಾವಾಗ ಪಾವತಿಯಾಗುತ್ತೆ..? ಆಗಿರೋ ಸಮಸ್ಯೆಯಾದ್ರೂ ಏನು ಅನ್ನೋದಕ್ಕೆ ಇಲ್ಲಿದೆ ಒಂದು ರಿಪೋರ್ಟ್. 

ಒಂದಲ್ಲ ಎರಡಲ್ಲ.. ಕಳೆದ ಮೂರು ತಿಂಗಳಿನಿಂದಲೂ ಅಂಗನವಾಡಿ ನೌಕರರಿಗೆ ಸಂಬಳವಿಲ್ಲ.. ಜೊತೆಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಲ್ಲಿ ಸೇವೆ ಸಲ್ಲಿಸ್ತಾ ಇರುವ ಅಧಿಕಾರಿಗಳು ಮತ್ತು ಸಿಬ್ಬಂದಿಗೂ ವೇತನ ಪಾವತಿಯಾಗಿಲ್ಲ. ಇದು ಕೇವಲ ಒಂದು ಜಿಲ್ಲೆಯ ಸಮಸ್ಯೆಯಲ್ಲ. ಇಡೀ ರಾಜ್ಯದಲ್ಲಿಯೇ ಬರೋಬ್ಬರಿ ೫೯ ಸಾವಿರ ಸಹಾಯಕಿಯರಿಗೆ ೩ ತಿಂಗಳಿನಿಂದ ಗೌರವಧನ ಪಾವತಿ ಮಾಡಿಲ್ಲ. ಮಾಸಿಕ ೧೦ ಸಾವಿರ ಪಡೆಯುವ ಕಾರ್ಯಕರ್ತೆಯರು, ೫ ಸಾವಿರ ಪಡೆಯುವ ಸಹಾಯಕಿಯರು ಇದೇ ಹಣ ನಂಬಿ ಜೀವನ ನಡೆಸ್ತಾ ಇದಾರೆ. ೩ ತಿಂಗಳಿನಿಂದ ವೇತನ ಬಾರದೆ ಸಂಕಷ್ಟಕ್ಕೆ ಸಿಲುಕಿದ್ದಾರೆ. 

ಗೌರವಧನದ ಒಟ್ಟು ಮೊತ್ತದಲ್ಲಿ ಶೇ. ೬೦ರಷ್ಟು ಕೇಂದ್ರದ ಪಾಲು, ಶೇ. ೪೦ ರಷ್ಟು ರಾಜ್ಯದ ಪಾಲಿದೆ. ಹೊಸ ವ್ಯವಸ್ಥೆಯಲ್ಲಿ ತಾಂತ್ರಿಕ ದೋಷಗಳು ಇರುವ ಕಾರಣ ವೇತನ ಇನ್ನೂ ಪಾವತಿಯಾಗಿಲ್ಲ. ಇನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗೂ ಮೂರು ತಿಂಗಳಿನಿಂದ ವೇತನ ಪಾವತಿಯಾಗಿಲ್ಲ. ಪಬ್ಲಿಕ್ ಫೈನಾನ್ಸ್ ಮ್ಯಾನೇಜ್‌ಮೆಂಟ್ ಸಿಸ್ಟಂ ಖಾತೆಯ ಮೂಲಕ ವೇತನ ಪಾವತಿಸಲು ಕೇಂದ್ರ ಸರಕಾರ ಆದೇಶ ನೀಡಿರೋದು ಇಲಾಖೆಯ ಸಿಬ್ಬಂದಿಗೂ ಸಂಕಷ್ಟ ತಂದೊಡ್ಡಿದೆ. ಈ ಕುರಿತು ಕನ್ನಡ ಮೀಡಿಯಂ ವಾಹಿನಿಗೆ ದೂರವಾಣಿಯಲ್ಲಿ ಮಾಹಿತಿ ನೀಡಿದ ರಾಜ್ಯ ಸರಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್. ಷಡಾಕ್ಷರಿ, ಇನ್ನು ೨ ದಿನದ ಒಳಗೆ ವೇತನ ಪಾವತಿ ಮಾಡುವ ಭರವಸೆಯನ್ನು ನೀಡಿದ್ರು. 

ಮಕ್ಕಳ ಶಾಲಾ ಶುಲ್ಕ ಕಟ್ಟಬೇಕು, ಬ್ಯಾಂಕ್ ಕಂತು ಕಟ್ಟಬೇಕು ಇಂತಹ ಪರಿಸ್ಥಿತಿಯಲ್ಲಿ ವೇತನ ವಿಳಂಬವಾದರೆ ನಾವು ಜೀವನ ನಡೆಸೋದು ಹೇಗೆ ಅಂತ ಅಂಗನವಾಡಿ ಕಾರ್ಯಕರ್ತೆಯರು ಪ್ರಶ್ನಿಸ್ತಾ ಇದ್ದಾರೆ. ಇವತ್ತು ಸಂಬಳ ಆಗುತ್ತೆ.. ನಾಳೆ ಸಂಬಳವಾಗುತ್ತೆ ಅಂತ ಅಂಗನವಾಡಿ ನೌಕರರು ಮತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ನೌಕರರು ಕಾಯ್ತಾ ಇದಾರೆ. ಸಂಬಂಪಟ್ಟವರು ಎಚ್ಚೆತ್ತುಕೊಂಡು ವೇತನ ಬಿಡುಗಡೆ ಮಾಡಿದ್ರೆ, ಅದನ್ನೇ ನಂಬಿಕೊಂಡಿರುವ ಕುಟುಂಬದ ಸದಸ್ಯರು ಸಹ ನೆಮ್ಮದಿಯ ನಿಟ್ಟುಸಿರು ಬಿಡುತ್ತಾರೆ. 

ನ್ಯೂಸ್ ರೂಮ್ ಕನ್ನಡ ಮೀಡಿಯಂ ೨೪*೭