ವಿದ್ಯಾರ್ಥಿಗಳ ವಿರುದ್ಧ ಕ್ರಮಕ್ಕೆ ಎಬಿವಿಪಿ ಆಗ್ರಹ 

ಶಿವಮೊಗ್ಗ : ಸಹ್ಯಾದ್ರಿ ವಿಜ್ಞಾನ ಕಾಲೇಜಿನ ವಿದ್ಯಾರ್ಥಿಗಳ ವಾಟ್ಸಪ್ ಗ್ರೂಪ್ ಒಂದರಲ್ಲಿ ಪಾಕಿಸ್ತಾನದ ಧ್ವಜದ ಸ್ಟಿಕರ್ ಪೋಸ್ಟ್ ಮಾಡುವ ಮೂಲಕ ವಿದ್ಯಾರ್ಥಿಗಳು ದೇಶದ್ರೋಹವೆಸಗಿದ್ದಾರೆ. ಹೀಗಾಗಿ ಕೂಡಲೆ ಆ ವಿದ್ಯಾರ್ಥಿಗಳನ್ನು ಕಾಲೇಜಿನಿಂದ ಡಿಬಾರ್ ಮಾಡಬೇಕೆಂದು ಆಗ್ರಹಿಸಿ ಎಬಿವಿಪಿ ಪ್ರತಿಭಟನೆ ನಡೆಸಿದೆ.

ಫೆಬ್ರವರಿ 7ನೇ ತಾರೀಕು ಕಾಲೇಜಿನ ಬಿಸಿಎ ವಿಭಾಗದ ವಿದ್ಯಾರ್ಥಿಗಳ ವಾಟ್ಸ್‌ಪ್ ಗ್ರೂಪ್‌ನಲ್ಲಿ ಪಾಕಿಸ್ತಾನದ ಧ್ವಜದ ಸ್ಟಿಕರ್ ಪೋಸ್ಟ್ ಮಾಡಿದ್ದರು. ಈ ಕೃತ್ಯವನ್ನು ಖಂಡಿಸಿ ಎಬಿವಿಪಿ ಫೆಬ್ರವರಿ 8ರಂದು ಪ್ರತಿಭಟನೆ ನಡೆಸಿ ಕ್ರಮ ಕೈಗೊಳ್ಳವಂತೆ ಆಗ್ರಹಿತ್ತು. ಆದರೆ ಈ ವರೆಗೂ ಕಾಲೇಜಿನ ಆಡಳಿತ ಮಂಡಳಿ ಆ ವಿದ್ಯಾರ್ಥಿಗಳ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಿಲ್ಲವೆಂದು ಪುನಃ ಎಬಿವಿಪಿ ಪ್ರತಿಭಟನೆ ನಡೆಸಿದೆ.

ಈ ಕುರಿತು ಪ್ರತಿಕ್ರಿಯೆ ನೀಡಿದ ಕಾಲೇಜಿನ ಪ್ರಾಂಶುಪಾಲರಾದ ಪ್ರೋ ವಾಗ್ದೇವಿ, ವಿದ್ಯಾರ್ಥಿಗಳು ಚಾಟ್ ಮಾಡಿದ ಆ ಗ್ರೂಪ್‌ನಲ್ಲಿ ಯಾವುದೇ ಅಧ್ಯಾಪಕರಿಲ್ಲ. ಅದು ಕೇವಲ ವಿದ್ಯಾರ್ಥಿಗಳೇ ಸೇರಿಕೊಂಡು ಮಾಡಿಕೊಂಡ ಗ್ರೂಪ್. ಅಲ್ಲದೆ ಈ ರೀತಿಯ ವಿಷಯಗಳಲ್ಲಿ ಏಕಾಏಕಿ ಕ್ರಮ ಕೈಗೊಳ್ಳಲು ಬರುವುದಿಲ್ಲ. ಸೈಬರ್ ಪೋಲಿಸ್, ಹೀಗೆ ಹಲವು ರೀತಿಯಲ್ಲಿ ಈ ಕುರಿತು ತನಿಖೆ ನಡೆಯಬೇಕಿದೆ. ಆದ್ದರಿಂದ ವಿದ್ಯಾರ್ಥಿಗಳ ಮೇಲೆ ತಕ್ಷಣವೇ ಕ್ರಮ ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ ಎಂದರು.

ಆದರೆ ಪ್ರತಿಭಟನಾಕಾರರು ಕುವೆಂಪು ವಿವಿ ರಿಜಿಸ್ಟಾರ್ ಬರುವವರಗೂ ಪ್ರತಿಭಟನೆ ನಿಲ್ಲಿಸುವುದಿಲ್ಲ ಎಂದು ಪ್ರತಿಭಟನೆ ಮುಂದುವರೆಸಿದರು. ಕಡೆಗೆ ರಿಜಿಸ್ಟಾರ್ ಪರವಾಗಿ ಡೆಪ್ಯುಟಿ ರಿಜಿಸ್ಟಾರ್ ಸ್ಥಳಕ್ಕೆ ಬಂದು ಪ್ರತಿಭಟನಾಕಾರರಿಂದ ಮನವಿ ಪತ್ರ ಸ್ವೀಕರಿಸಿದರು.