ಶಿವಮೊಗ್ಗ : ಇಲ್ಲಿನ ಜಿಲ್ಲಾ ಪಂಚಾಯತ್ ಸಿಇಒ ವೈಶಾಲಿ ದಲಿತರನ್ನು ನಿರ್ಲಕ್ಷ್ಯ ಮಾಡುತ್ತಿದ್ದು, ದಲಿತರಿಗೆ ಕಾನೂನು ಪ್ರಕಾರ ನೀಡಬೇಕಾದ ಬಡ್ತಿ ಹುದ್ದೆಗಳನ್ನ ನೀಡದೆ, ಹಲವಾರು ಆಪಾದನೆಗಳಿರುವ ಭ್ರಷ್ಟ ಅಧಿಕಾರಿಗಳಿಗೆ ಬಡ್ತಿ ನೀಡುತ್ತಿದ್ದಾರೆ. ಈ ಮೂಲಕ ಸಾಮಾಜಿಕ ನ್ಯಾಯ ಕೊಡಿಸುವಲ್ಲಿ ವಿಫಲರಾಗಿದ್ದಾರೆ. ಹೀಗಾಗಿ ಇವರನ್ನು ತನಿಖೆಗೆ ಒಳಪಡಿಸಿ ದಲಿತರಿಗೆ ಸಂವಿಧಾನ ಬದ್ಧ ಹಕ್ಕುಗಳನ್ನು ಕೊಡಬೇಕು ಎಂದು ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾಧಿಕಾರಿ ಆವರಣದಲ್ಲಿ ಪ್ರತಿಭಟನೆ ನಡೆಸಿದೆ.
ಸಿಇಒ ವೈಶಾಲಿ ಅವರು ಜಿಲ್ಲೆಗೆ ಬಂದ ದಿನದಿಂದಲೂ ದಲಿತರ ಕುರಿತ ಕಾಳಜಿ ತೋರಿಸಿಲ್ಲ. ಭ್ರಷ್ಟ ಅಧಿಕಾರಿಗಳ ಜೊತೆ ಕೈ ಜೋಡಿಸಿ ಗ್ರಾಮೀಣಾಭಿವೃದ್ಧಿ ಇಲಾಖೆ ಹಾಗೂ ಜಿಲ್ಲಾ ಪಂಚಾಯತ್ ಇಂಜಿನಿಯರಿಂಗ್ ವಿಭಾಗದಲ್ಲಿ ಜನರ ತೆರಿಗೆ ಹಣವನ್ನ ಲಪಟಾಯಿಸಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿ ಜಿಲ್ಲಾಧಿಕಾರಿ ಮೂಲಕ ಜಿಲ್ಲಾ ಉಸ್ತುವರಿ ಸಚಿವರಿಗೆ ಮನವಿ ಪತ್ರ ಸಲ್ಲಿಸಿದ್ದಾರೆ.