ಶಂಕರಘಟ್ಟ : ರಾಷ್ಟ್ರದ ಹಿತಾಸಕ್ತಿ ಕಾಯ್ದುಕೊಳ್ಳಲು ಅಭಿವೃದ್ಧಿ ಚಟುವಟಿಕೆಗಳು ಎಷ್ಟು ಮುಖ್ಯವೋ, ಜೀವವೈವಿಧ್ಯ ಮತ್ತು ವನ್ಯಜೀವಿ ಸಂರಕ್ಷಣೆಯೂ ಅಷ್ಟೇ ಮುಖ್ಯ ಎಂದು ಕುವೆಂಪು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಬಿ.ಪಿ.ವೀರಭದ್ರಪ್ಪ ಅಭಿಪ್ರಾಯಪಟ್ಟರು.
ವನ್ಯಜೀವಿ ಅಧ್ಯಯನದಲ್ಲಿ ಕ್ಷೇತ್ರ ಸಂಶೋಧನಾ ತಂತ್ರಗಳು ವಿಷಯದ ಕುರಿತು ಕುವೆಂಪು ವಿವಿಯಲ್ಲಿ ಒಂದು ವಾರದ ಕಾರ್ಯಾಗಾರವನ್ನ ಹಮ್ಮಿಕೊಳ್ಳಲಾಗಿದೆ. ಸ್ನಾತಕೋತ್ತರ ವನ್ಯಜೀವಿ ಮತ್ತು ನಿರ್ವಹಣಾ ವಿಭಾಗದ ವತಿಯಿಂದ ಆಯೋಸಿರುವ ಕಾರ್ಯಾಗಾರವನ್ನ ಉದ್ಘಾಟಿಸಿ ಮಾತನಾಡಿದ ಕುವೆಂಪು ವಿವಿ ಕುಲಪತಿ ಪ್ರೊ. ಬಿ.ಪಿ.ವೀರಭದ್ರಪ್ಪ, ಹೊಸ ಬಗೆಯ ನೈಸರ್ಗಿಕ ವಿಕೋಪಗಳು ಮತ್ತು ಮಾನವ ಕೇಂದ್ರಿತ ಅಭಿವೃದ್ಧಿ ಚಟುವಟಿಕೆಗಳಿಂದಾಗಿ ಪ್ರಕೃತಿಯಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಇದರ ನಿರ್ವಹಣೆಯು ರಾಷ್ಟ್ರ ನಾಯಕರಿಗೆ ಸವಾಲಾಗಿ ಪರಿಣಮಿಸಿದೆ.
ಇಂದು ಜಗತ್ತು ಹವಾಮಾನ ವೈಪರೀತ್ಯ, ಜಾಗತಿಕ ತಾಪಮಾನ ಏರಿಕೆಯಂತಹ ಗಂಭೀರ ಸಮಸ್ಯೆಗಳನ್ನು ಎದುರಿಸುತ್ತಿದೆ ಎಂದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ವನ್ಯಜೀವಿ ತಜ್ಞ ಡಾ. ಸಂಜಯ್ ಗುಬ್ಬಿ ಭಾಗವಹಿಸಿದ್ದರು. ಒಂದು ವಾರ ನಡೆಯುವ ಕಾರ್ಯಾಗಾರದಲ್ಲಿ ವನ್ಯಜೀವಿ ತಜ್ಞರಾದ ಪೂರ್ಣೇಶ ಎಚ್.ಸಿ, ಶ್ರವಣ ಸುತರ್, ಮಲೈಕಾ ಎಂ.ಸಿ, ಕಿರಣ್ ಪ್ರಭು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಲಿದ್ದಾರೆ. ವಿಭಾಗದ ಮುಖ್ಯಸ್ಥ ಡಾ. ವಿಜಯಕುಮಾರ, ಡಾ. ಬಿ.ತಿಪ್ಪೇಸ್ವಾಮಿ, ವಿವಿಧ ವಿಭಾಗಗಳ ಅಧ್ಯಾಪಕರು, ಸಂಶೋಧನಾರ್ಥಿಗಳು, ವಿದ್ಯಾರ್ಥಿಗಳು ಭಾಗವಹಿಸಿದ್ದರು.