ಶಿವಮೊಗ್ಗ : ಸಂಸದ ಪ್ರತಾಪ್ ಸಿಂಹ ಮಾತೆತ್ತಿದರೆ ಪಾಕಿಸ್ತಾನಕ್ಕೆ ಹೋಗಿ ಎನ್ನುತ್ತಾರೆ. ನೀವೇ ಯಾಕೆ ಪಾಕಿಸ್ತಾನಕ್ಕೆ ಹೋಗಬಾರದು ಎಂದು ಕೆಪಿಸಿಸಿ ವಕ್ತಾರ ಕಿಮ್ಮನೆ ರತ್ನಾಕರ್ ಪ್ರಶ್ನೆ ಹಾಕಿದ್ದಾರೆ. ಪಕ್ಷ ಸಂಘಟನೆಯ ಕುರಿತು ಶಿವಮೊಗ್ಗದ ಕಾಂಗ್ರೆಸ್ ಭವನದಲ್ಲಿ ಕರೆಯಲಾಗಿದ್ದ ಸಭೆಯಲ್ಲಿ ಪಾಲ್ಗೊಂಡು ಮತಾಡಿದ ಅವರು, ಸಂಸದ ಪ್ರತಾಪ್ ಸಿಂಹ ವಿರುದ್ಧ ವಾಗ್ದಾಳಿ ನಡೆಸಿದ್ರು.
ಹಿಜಾಬ್ ಮತ್ತು ಕೇಸರಿ ಶಾಲಿನ ವಿವಾದ ಅಂತಾರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಭಾವನೆಗಳನ್ನು ಕೆರಳಿಸಿ ಬಿಜೆಪಿ ಮತ ಕೇಳುವ ಮಟ್ಟಕ್ಕೆ ಬೆಳೆದಿದೆ. ಹಿಜಾಬ್ ವಿವಾದ ಮುಂಬರುವ ಚುನಾವಣೆಯ ಬಿಜೆಪಿ ತಾಲೀಮು ಎಂದು ಕಿಮ್ಮನೆ ರತ್ನಾಕರ್ ಕಿಡಿಕಾರಿದರು.
ಇನ್ನು ಬಿಜೆಪಿಯವರು ಇಡೀ ದೇಶದ ಇತಿಹಾಸವನ್ನ ಬದಲಾವಣೆ ಮಾಡ್ತಾಯಿದ್ದಾರೆ. ಗಾಂಧೀಜಿ ಹಾಗೂ ನೆಹರು ಅವರನ್ನ ವಿಲನ್ ಆಗಿ ತೋರಿಸಲಾಗುತ್ತಿದೆ. ಇಲ್ಲವಾದಲ್ಲಿ ಅವರಿಗೆ ರಾಜಕೀಯವಾಗಿ ಬದುಕಲು ಸಾಧ್ಯವಿಲ್ಲ. ಆದ್ರೆ ಅಂಬೇಡ್ಕರ್ ಹಿಂದೂ ಧರ್ಮವನ್ನ ತ್ಯಜಿಸಿದ್ದು ಯಾಕೆ ಎಂಬ ಪ್ರಶ್ನೆಗೆ ಬಿಜೆಪಿಯವರು ಉತ್ತರ ನೀಡುವುದಿಲ್ಲ. ಅಂಬೇಡ್ಕರ್ ಅವರು ನಾನು ಹಿಂದೂವಾಗಿ ಹುಟ್ಟಿದ್ದೇನೆ, ಹಿಂದೂವಾಗಿ ಸಾಯುವುದಿಲ್ಲವೆಂದು ಹೇಳಿದ್ದರು. ಬಿಜೆಪಿಯವರಿಗೆ ಸಾಮರ್ಥ್ಯವಿದ್ದರೆ ಅವರಿಗೆ ಬೈಯಲಿ ನೋಡೋಣವೆಂದು ಸವಾಲು ಹಾಕಿದರು.