ಬೆಂಗಳೂರು : ಭದ್ರಾವತಿ ಕ್ಷೇತ್ರದಲ್ಲಿ ೬ ಪೊಲೀಸ್ ಠಾಣೆಗಳು ಬರುತ್ತವೆ. ಹಳೆನಗರ ಹಾಗೂ ಗ್ರಾಮಾಂತರ ಪೊಲೀಸ್ ಠಾಣೆಗಳನ್ನು ಹೊರತು ಪಡಿಸಿದರೆ ಉಳಿದ ಎಲ್ಲಾ ಠಾಣೆಗಳು ಹಾಳಾಗಿವೆ ಎಂದು ಶಾಸಕ ಬಿ.ಕೆ ಸಂಗಮೇಶ್ ಸದನದ ಗಮನ ಸೆಳೆದಿದ್ದಾರೆ. ಈ ಕುರಿತು ಮಾತನಾಡಿದ ಅವರು, ನಮ್ಮ ಕ್ಷೇತ್ರದಲ್ಲಿ ಎಲ್ಲಾ ಠಾಣೆಗಳು ಹಾಳಾಗಿವೆ. ಆದ್ದರಿಂದ ಶೀಘ್ರವಾಗಿ ಹೊಸ ಪೊಲೀಸ್ ಠಾಣೆಗಳನ್ನು ಮಂಜೂರು ಮಾಡಬೇಕೆಂದು ಆಗ್ರಹಿಸದರು.
ಇದಕ್ಕೆ ಪ್ರತಿಕ್ರಿಯೆ ನೀಡಿದ ಗೃಹಸಚಿವ ಆರಗ ಜ್ಞಾನೇಂದ್ರ, ರಾಜ್ಯದಲ್ಲಿ ಶಿಥಿಲಾವಸ್ಥೆಯಲ್ಲಿರುವ ೧೦೦ ಪೊಲೀಸ್ ಠಾಣೆಗಳಿಗೆ ಹೊಸ ಠಾಣೆಗಳನ್ನು ಇಲಾಖೆ ವತಿಯಿಂದ ಕಟ್ಟಿಸಲು ಆಡಳಿತಾತ್ಮಕ ಮಂಜುರಾತಿ ನೀಡಿದ್ದೇವೆ. ಇದರಲ್ಲಿ ಭದ್ರಾವತಿಯ ೨ ಠಾಣೆಗಳನ್ನು ಹೊಸದಾಗಿ ಮಾಡಲು ಯೋಚಿಸಿದ್ದೇವೆ. ಶಾಸಕರು ಹೇಳಿರುವ ಹಾಗೆ ಪೇಪರ್ ಟೌನ್ ಠಾಣೆ ಶಿಥಿಲಾವಸ್ಥೆಯಲ್ಲಿದೆ. ನೂತನ ಠಾಣೆ ನಿರ್ಮಿಸಲು ಸ್ವಂತ ಜಾಗವಿಲ್ಲ. ಹೀಗಾಗಿ ಪೊಲೀಸ್ ಇಲಾಖೆಗೆ ಸ್ವಂತ ಜಾಗವನ್ನು ನೀಡುವಂತೆ ಎಂಪಿಎಂ ಎಂಡಿಗೆ ನಾನು ಪತ್ರ ಬರೆಯುತ್ತೇನೆ. ನೀವು ಕೂಡ ಈ ಕುರಿತು ಪತ್ರ ಬರೆಯಿರಿ ಎಂದು ಶಾಸಕ ಬಿ.ಕೆ.ಸಂಗಮೇಶ್‌ಗೆ ಹೇಳಿದರು.