ಡಿಸೆಂಬರ್ ೨೯ರಂದು ಎಡದಂಡೆ ಮತ್ತು ೩೦ ರಂದು ಬಲದಂಡೆ ನಾಲೆಗಳಿಗೆ ನೀರು

ಶಿವಮೊಗ್ಗ : ಪ್ರಸಕ್ತ ಸಾಲಿನ ಬೇಸಿಗೆ ಹಂಗಾಮಿನ ಬೆಳೆಗಳಿಗಾಗಿ ಡಿಸೆಂಬರ್ 29ರಂದು ಎಡದಂಡೆ ಮತ್ತು ಡಿಸೆಂಬರ್ 30 ರಂದು ಬಲದಂಡೆ ನಾಲೆಗಳಿಗೆ 120 ದಿನಗಳ ಕಾಲ ನೀರು ಹರಿಸಲು ಭದ್ರಾ ಯೋಜನಾ ನೀರಾವರಿ ಸಲಹಾ ಸಮಿತಿ ಸಭೆ ತೀರ್ಮಾನ ಕೈಗೊಂಡಿದೆ ಎಂದು ಭದ್ರಾ ಅಚ್ಚುಕಟ್ಟು ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷೆ ಪವಿತ್ರಾ ರಾಮಯ್ಯ ತಿಳಿಸಿದರು.

ಭದ್ರಾ ಯೋಜನೆಯ ಅಚ್ಚುಕಟ್ಟು ಪ್ರದೇಶಕ್ಕೆ 2021 - 22 ನೇ ಸಾಲಿನ ಬೇಸಿಗೆ ಬೆಳೆಗಳಿಗಾಗಿ ಬಲದಂಡೆ, ಎಡದಂಡೆ ನಾಲೆಗಳು, ಆನವೇರಿ, ದಾವಣಗೆರೆ, ಮಲೆಬೆನ್ನೂರು ಮತ್ತು ಹರಿಹರ ಶಾಖಾ ನಾಲೆಗಳಲ್ಲಿ ನೀರನ್ನು ಹರಿಸುವ ಮತ್ತು ಬೆಳೆ ಕ್ಷೇತ್ರವನ್ನು ಪ್ರಕಟಿಸುವ ಕುರಿತು ತೀರ್ಮಾನ ಕೈಗೊಳ್ಳಲು ಭದ್ರಾ ಕಾಡಾ, ಶಿವಮೊಗ್ಗ ಇವರ ಅಧ್ಯಕ್ಷತೆಯಲ್ಲಿ ಇಂದು ಭದ್ರಾ ಅಚ್ಚುಕಟ್ಟು ಅಭಿವೃದ್ದಿ ಪ್ರಾಧಿಕಾರ ಕಚೇರಿ ಸಭಾಂಗಣದಲ್ಲಿ ನಡೆದ 79ನೇ ಭದ್ರಾ ಯೋಜನಾ ನೀರಾವರಿ ಸಲಹಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದ ಅವರು ನೀರಾವರಿ ಸಲಹಾ ಸಮಿತಿಯ ಸರ್ವ ಸದಸ್ಯರೊಂದಿಗೆ ಚರ್ಚಿಸಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಡಿಸೆಂಬರ್ 29ರ ರಾತ್ರಿಯಿಂದ ಎಡದಂಡೆ ನಾಲೆ ಮತ್ತು ಡಿಸೆಂಬರ್ 30ರ ರಾತ್ರಿಯಿಂದ ಬಲದಂಡೆ ನಾಲೆಗಳಿಗೆ 120 ದಿನಗಳ ಕಾಲ ನೀರು ಹರಿಸಲಾಗುವುದು. ಅಚ್ಚುಕಟ್ಟು ಪ್ರದೇಶದ ಯಾವುದೇ ನಾಲೆಗಳ ಭಾಗದ ರೈತರಿಗೆ ತೊಂದರೆಯಾಗದಂತೆ ನೀರು ಹರಿಸಲು ಕ್ರಮ ವಹಿಸಲಾಗಿದೆ ಎಂದು ತಿಳಿಸಿದರು. ದಾವಣಗೆರೆ, ಮಲೆಬೆನ್ನೂರು ಶಾಖಾ ನಾಲೆಗಳಿಗೆ ಸ್ವಲ್ಪ ತಡವಾಗಿ ಅಂದರೆ ಡಿಸೆಂಬರ್ 6 ಅಥವಾ 7ಕ್ಕೆ ನೀರು ಹರಿಸುವಂತೆ ಅಧಿಕಾರಿಗಳು ಕೇಳಿಕೊಂಡಿರುವ ಹಿನ್ನೆಲೆ ಅಭಿಯಂತರರು ಅಲ್ಲಿ ಮರಳಿನ ತಡೆ ಒಡ್ಡಿ ನೀರು ಹರಿಸುವಂತೆ ಸೂಚನೆ ನೀಡಿದ್ದೇನೆ. ಭದ್ರಾ ಜಲಾಶಯದಲ್ಲಿ ಡಿಸೆಂಬರ್ 28ರಂದು 57.703 ಟಿಎಂಸಿ ನೀರು ಬಳಕೆಗೆ ಲಭ್ಯವಿದೆ. ಬೇಸಿಗೆ ಅವಧಿಗೆ 51.97 ಟಿಎಂಸಿ ನೀರು ಅವಶ್ಯವಿದ್ದು, 5.733 ಟಿಎಂಸಿ ನೀರು ಜಲಾಶಯದಲ್ಲಿ ಉಳಿಯಲಿದೆ ಎಂದರು.

ರೈತ ಮುಖಂಡರಾದ ಬಸವರಾಜಪ್ಪ ಮಾತನಾಡಿ, ಭದ್ರಾ ಅಚ್ಚುಕಟ್ಟು ಪ್ರದೇಶ ವಿಭಿನ್ನ ಹವಾಮಾನ ಮತ್ತು ಮಣ್ಣಿನ ಗುಣ ಹೊಂದಿದೆ. ಈ ಪ್ರಾಧಿಕಾರದ ವ್ಯಾಪ್ತಿಯಲ್ಲಿ ಏಕ ಕಾಲದಲ್ಲಿ ನೀರು ಹರಿಸುವುದು ಮತ್ತು ಬಂದ್ ಮಾಡುವುದು ಕಷ್ಟ. ಏಕೆಂದರೆ ಭದ್ರಾವತಿ ಸುತ್ತಮುತ್ತಲಿನ ಪ್ರದೇಶದಲ್ಲಿ ಕಲ್ಲುಭೂಮಿ, ಕೆಂಪುಮಿಶ್ರತ ಮಣ್ಣಿನಲ್ಲಿ ಅಡಿಕೆ ಇತ್ಯಾದಿ ಬೆಳೆಯಲಾಗುತ್ತಿದ್ದು ಈ ಮಣ್ಣು 20 ರಿಂದ 25 ದಿನಕ್ಕೆ ಮಾತ್ರ ನೀರನ್ನು ಹಿಡಿದಿಡಲು ಸಾಧ್ಯ. ಅದೇ ದಾವಣಗೆರೆ, ಮಲೆಬೆನ್ನೂರು, ಹರಿಹರ ಭಾಗದಲ್ಲಿ ಎರೆಮಣ್ಣಿದ್ದು ಒಂದು ತಿಂಗಳವರೆಗೆ ನೀರನ್ನು ತಡೆದಿಡುವ ಸಾಮಥ್ರ್ಯ ಅಲ್ಲಿನ ಮಣ್ಣಿಗೆ ಇರುತ್ತದೆ. ಆದ್ದರಿಂದ ಆ ಭಾಗಕ್ಕೆ ಸ್ವಲ್ವ ತಡವಾಗಿ ನೀರು ಹರಿಸಬೇಕೆಂದು ಸದಸ್ಯರು ಕೇಳಿದ್ದಾರೆ. ಸರ್ವ ಸದಸ್ಯರ ಚರ್ಚೆ ನಂತರ ಎಲ್ಲರಿಗೂ ಅನುಕೂಲ ಆಗುವ ರೀತಿಯಲ್ಲಿ ಇಂದು ತೀರ್ಮಾನ ಕೈಗೊಳ್ಳಲಾಗಿದೆ. ಜೊತೆಗೆ ವಿದ್ಯುತ್ ಎಲ್‌ಸಿ ವ್ಯವಸ್ಥೆಯಂತೆ ನೀರು ಬಿಡಲು ಕೂಡ ಒಂದೆರಡು ಮೂರು ಗೇಟ್ ವ್ಯವಸ್ಥೆ ಮಾಡಿಕೊಂಡರೆ, ಬೇಡವಾದ ಭಾಗಕ್ಕೆ ಗೇಟ್ ಹಾಕಿ, ಬೇಕಾದ ಕಡೆ ಗೇಟ್ ಓಪನ್ ಮಾಡಿ ನೀರು ಹರಿಸಬಹುದು. ಇದರಿಂದ ರೈತರಿಗೆ ಅನುಕೂಲವಾಗುತ್ತದೆ. ಆದ್ದರಿಂದ ಈ ನಿಟ್ಟಿನಲ್ಲಿ ಸಂಬಂಧಿಸಿದ ಇಂಜಿನಿಯರುಗಳು ಅಂದಾಜು ಪಟ್ಟಿ ತಯಾರಿಸುವಂತೆ ತಿಳಿಸಿದ ಅವರು ಶಾಸಕರು, ಸಂಸದರು ಮತ್ತು ಅಧ್ಯಕ್ಷರು ಇದನ್ನು ಸರ್ಕಾರದ ಗಮನಕ್ಕೆ ತಂದು ಸೂಕ್ತ ನಿರ್ಧಾರ ಕೈಗೊಳ್ಳುವಂತೆ ಮನವಿ ಮಾಡಿದರು.