ಹಿಜಾಬ್-ಕೇಸರಿ ಶಾಲು ವಿವಾದ: ವಿವಿಧ ಪ್ರಕರಣಗಳು ದಾಖಲು 

ಶಿವಮೊಗ್ಗ : ನಗರದಲ್ಲಿ ಹಿಜಾಬ್ ಹಾಗೂ ಕೇಸರಿ ಶಾಲು ವಿವಾದದಲ್ಲಿ ಮಂಗಳವಾರ ಕೆಲವು ಅಹಿತಕರ ಘಟನೆಗಳು ನಡೆದಿವೆ. ಈ ಹಿನ್ನೆಲೆಯಲ್ಲಿ ಕೋಟೆ ಪೊಲೀಸ್ ಠಾಣೆಯಲ್ಲಿ ಕೆಲವು ಪ್ರಕರಣಗಳನ್ನು ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಲಾಗಿದೆ.

ಶಿವಮೊಗ್ಗ ಬಾಪೂಜಿ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರಥಮ ವರ್ಷದ ಬಿ.ಎಸ್.ಸಿ ವ್ಯಾಸಾಂಗ ಮಾಡುತ್ತಿದ್ದ ವಿದ್ಯಾರ್ಥಿಗಳಿಬ್ಬರು ಕಾಲೇಜಿನ ಕಾರಿಡಾರ್‌ನಲ್ಲಿ ನಿಂತುಕೊಂಡಿದ್ದಾಗ ಗುಂಪಿನಲ್ಲಿದ್ದವರು ಕೆಲವರು ಕಲ್ಲುಗಳನ್ನು ಎಸೆದಿದ್ದು ಕಲ್ಲು ಇವರ ಹಣೆಗೆ ಮತ್ತು ತಲೆಯ ಹಿಂಭಾಗಕ್ಕೆ ಬಿದ್ದು ಇಬ್ಬರಿಗೂ ಗಾಯಗಳಾಗಿವೆ.

ಶಿವಮೊಗ್ಗ ನಗರದ ಬಸವನಗುಡಿ ವಾಸಿಯೊಬ್ಬರು ಗಾರೆ ಕೆಲಸ ಮುಗಿಸಿಕೊಂಡು ಮನೆಗೆ ಹೋಗುವಾಗ ಬಾಪೂಜಿ ನಗರದ ಪ್ರಥಮ ದರ್ಜೇ ಕಾಲೇಜ್  ಕ್ರಾಸ್ ಹತ್ತಿರ ಪರ್ನಿಚರ್ ಶಾಪ್ ಎದುರು ರಸ್ತೆಯಲ್ಲಿ ಹೋಗುತ್ತಿರುವಾಗ ಸುಮಾರು 30-40 ಜನರು ಗುಂಪು ಕಟ್ಟಿಕೊಂಡು ಬಂದು ಅಡ್ಡಗಟ್ಟಿ ಗಲಾಟೆ ಮಾಡಿ ಅವಾಚ್ಯವಾಗಿ ಬೈದು ಕೈಗಳಿಂದ ಹಲ್ಲೆ ಮಾಡಿರುವ ಕುರಿತಾಗಿ ಪ್ರಕರಣ ದಾಖಲಾಗಿದೆ.

ಮಂಗಳವಾರ ಹಿಜಾಬ್ ಬಂದೋಬಸ್ತ್ ಕರ್ತವ್ಯ ನಿಮಿತ್ತ ಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯ ಪೊಲೀಸ್ ವಾಹನಕ್ಕೆ ಹಾನಿಯಾಗಿದ್ದು, ಈ ಕುರಿತಾಗಿಯೂ ಪ್ರಕರಣ ದಾಖಲಾಗಿದೆ. ಅಲ್ಲದೆ ಶಿವಮೊಗ್ಗ ಟಿಪ್ಪು ನಗರದ ನಿವಾಸಿಯೊಬ್ಬರು ಬೈಕ್‌ನಲ್ಲಿ ತನ್ನ ಸ್ನೇಹಿತರನ್ನು ಕೂರಿಸಿಕೊಂಡು ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ರಸ್ತೆಯಲ್ಲಿ ಹೋಗುತ್ತಿದ್ದಾಗ 8-10 ಜನ ಯುವಕರು ಇವರನ್ನು ಅಡ್ಡಗಟ್ಟಿ ಅವಾಚ್ಯವಾಗಿ ಬೈದು ಕೈಗಳಿಂದ ಹಾಗೂ ಆಯುಧಗಳಿಂದ ಹಲ್ಲೆ ನಡೆಸಿರುವುದಾಗಿಯೂ ದೂರು ದಾಖಲಾಗಿದೆ.