ಹೈಲೆಟ್ಸ್ :
ಚಿತ್ರದುರ್ಗದ ಮುರುಘಾ ಶ್ರೀಗಳಿಗೆ ಸದ್ಯಕ್ಕಿಲ್ಲ ರಿಲೀಫ್
ಮತ್ತೆ 14 ದಿನ ನ್ಯಾಯಾಂಗ ಬಂಧನ
ಜಿಲ್ಲಾ 2ನೇ ಅಪರ ಮತ್ತು ಸತ್ರ ನ್ಯಾಯಾಲಯ ಆದೇಶ
ಸೆಪ್ಟಂಬರ್ 27ರವರೆಗೆ ಶ್ರೀಗಳಿಗೆ ನ್ಯಾಯಂಗ ಬಂಧನ
ಚಿತ್ರದುರ್ಗ : ಪೋಕ್ಸೋ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೊಳಗಾಗಿರುವ ಮುರುಘಾ ಶ್ರೀಗಳಿಗೆ ಸದ್ಯಕ್ಕೆ ರಿಲೀಫ್ ಸಿಕ್ಕಿಲ್ಲ. ಶ್ರೀಗಳ ನ್ಯಾಯಾಂಗ ಬಂಧನ ಅವಧಿಯನ್ನು ಮತ್ತೆ ೧೪ ದಿನಗಳಿಗೆ ವಿಸ್ತರಿಸಲಾಗಿದೆ. ಸೆಪ್ಟಂಬರ್ ೨೭ರ ವರೆಗೆ ನ್ಯಾಯಾಂಗ ಬಂಧನ ವಿಸ್ತರಿಸಿ ಚಿತ್ರದುರ್ಗ ಜಿಲ್ಲಾ ೨ನೇ ಅಪರ ಮತ್ತು ಸತ್ರ ನ್ಯಾಯಾಲಯ ಆದೇಶ ಹೊರಡಿಸಿದೆ.
ಪ್ರಕರಣದಲ್ಲಿ ಮುರುಘಾ ಶ್ರೀಗಳಿಗೆ ವಿಧಿಸಿದ್ದ ನ್ಯಾಯಾಂಗ ಬಂಧನ ಸೆಪ್ಟಂಬರ್ ೧೪ಕ್ಕೆ ಕೊನೆಯಾಗಿತ್ತು. ಮತ್ತೆ ವಿಚಾರಣೆ ನಡೆಸಿದ ನ್ಯಾಯಾಲಯ, ಶ್ರೀಗಳ ನ್ಯಾಯಾಂಗ ಬಂಧನ ಅವಧಿಯನ್ನು ಮತ್ತೆ ವಿಸ್ತರಿಸಿ ಆದೇಶಿಸಿದೆ. ಕೋರ್ಟ್‌ನಿಂದ ಶ್ರೀಗಳನ್ನು ಮತ್ತೆ ಪೊಲೀಸರು ಜಿಲ್ಲಾ ಕಾರಾಗೃಹಕ್ಕೆ ಕರೆದೊಯ್ದರು.
ಇನ್ನು ಪ್ರಕರಣದ ಎ೨ ಆರೋಪಿ ಹಾಸ್ಟೆಲ್ ವಾರ್ಡನ್ ರಶ್ಮಿ ನ್ಯಾಯಾಂಗ ಬಂಧನವನ್ನು ನ್ಯಾಯಾಲಯ ಸೆಪ್ಟೆಂಬರ್ ೨೭ರವರೆಗೆ ವಿಸ್ತರಣೆ ಮಾಡಿದೆ. ಈ ಪ್ರಕರಣದ ೪ನೇ ಆರೋಪಿ ಮಠದ ಕಾರ್ಯದರ್ಶಿ ಪರಮಶಿವಯ್ಯ, ೫ನೇ ಆರೋಪಿ ವಕೀಲ ಗಂಗಾಧರಯ್ಯ ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ಇವರ ಜಾಮೀನು ಅರ್ಜಿಯ ವಿಚಾರಣೆಯನ್ನು ಕೋರ್ಟ್ ಮುಂದೂಡಿದೆ.