ಸಾಗರ : ಈ ಪ್ರದೇಶದ ಕೆಲ ಹಳ್ಳಿಗಳಿಗೆ ಇನ್ನೂ ಕೂಡ ವಿದ್ಯುತ್ ಸೌಲಭ್ಯವಿಲ್ಲ... ಸೇತುವೆ ಕಾರ್ಯ ಮುಗಿಯುವ ತನಕ ಉತ್ತಮ ಸಾರಿಗೆ ಸೌಲಭ್ಯವೂ ಮರೀಚಿಕೆ... ಆರೋಗ್ಯ ಸೇವೆಯೂ ಸರಿಯಾಗಿ ಸಿಗದೆ ಬಲಿಯಾಗುತ್ತಿವೆ ಜೀವಗಳು... ಇವೆಲ್ಲದರ ನಡುವೆ ಅಧಿಕಾರಿಗಳ ದಬ್ಬಾಳಿಕೆ... ಅದರಲ್ಲಿಯೂ ಅರಣ್ಯ ಇಲಾಖೆ ಅಧಿಕಾರಿಗಳ ದರ್ಪಕ್ಕೆ ಕಂಗಾಲಾಗಿರುವ ಜನರು... ಇದು ಶರಾವತಿ ಹಿನ್ನೀರಿನ ದೀಪ ಜನರ ಅರಣ್ಯ ರೋಧನೆ...
ದೀಪದ ಕೆಳಗೆ ಕತ್ತಲು ಎಂಬ ಮಾತು ಶರಾವತಿ ಹಿನ್ನೀರಿನ ದ್ವೀಪ ಪ್ರದೇಶದ ಜನರ ಪಾಲಿಗೆ ನೂರಕ್ಕೆ ನೂರು ಸತ್ಯ ಎನ್ನಿಸುತ್ತದೆ. ನಾಡಿಗೆ ಬೆಳಕು ನೀಡಿದ ಆ ಭಾಗದ ಕೆಲ ಹಳ್ಳಿಗಳಿಗೆ ಇನ್ನೂ ವಿದ್ಯುತ್ ಸೌಕರ್ಯ ಇಲ್ಲ. ಅಭಿವೃದ್ಧಿಗೆ ಅರಣ್ಯ ಇಲಾಖೆಯ ಅಡ್ಡಗಾಲು ಹೀಗೆ ನಾನಾ ಸಮಸ್ಯೆಗಳನ್ನು ಅಲ್ಲಿನ ಜನ್ರು ಅನುಭವಿಸ್ತಾಯಿದ್ದಾರೆ. ಜನರ ತಾಳ್ಮೆಯ ಕಟ್ಟೆ ಒಡೆದಿದ್ದು ಆಗಸ್ಟ್ ೫ರಂದು ಬೃಹತ್ ಪಾದಯಾತ್ರೆ ಹಾಗೂ ಅನಿರ್ಧಿಷ್ಟಾವಧಿ ಸತ್ಯಾಗ್ರಹ ನಡೆಸಲು ಮುಂದಾಗಿದ್ದಾರೆ. ಈ ಹಿನ್ನೆಲೆ ಆ ಭಾಗದ ಜನರ ಸಮಸ್ಯೆಗಳು ಏನು? ಯಾಕೆ ಪಾದಯಾತ್ರೆಗೆ ಮುಂದಾಗಿದ್ದಾರೆ ಅನ್ನುವುದರ ಕುರಿತು ಇಲ್ಲಿದೆ ಒಂದು ರಿಪೋರ್ಟ್.
ವರ್ಷಗಳಿಂದ ಈ ಸಮಸ್ಯೆ ಇದ್ದರೂ ಜನರು ಒಮ್ಮೊಮ್ಮೆ ಆಕ್ರೋಶ, ನೋವು ಹೊರಹಾಕಿ ಮತ್ತೆ ತಾಳ್ಮೆಯಿಂದ ಇರುತಿದ್ದರು. ಆದ್ರೀಗ ಇಲ್ಲಿನ ಜನರ ತಾಳ್ಮೆಯ ಕಟ್ಟೆ ಒಡೆದಿದೆ. ಇದಕ್ಕೆ ಕಾರಣವಾಗಿದ್ದು ಉರಳುಗಲ್ಲಿನ ನಡೆದ ಆ ಒಂದು ಘಟನೆ. ವಿದ್ಯುತ್ ಸಂಪರ್ಕ ಕಲ್ಪಿಸಲು, ಅರಣ್ಯ ಇಲಾಖೆಗೆ ಸೇರಿದ ೨೧ ಕಾಡು ಜಾತಿಯ ಮರಗಳನ್ನು ಆ ಗ್ರಾಮದ ಯುವಕರು ಕಡಿದಿದ್ದರು. ಇದಕ್ಕೆ ಅರಣ್ಯ ಇಲಾಖೆ ಕ್ರಮ ಕೈಗೊಂಡಿತ್ತು. ಅದ್ರೆ ಅಧಿಕಾರಿಗಳಿ ಮಾನವೀಯತೆಯನ್ನೆ ಮರೆತು ಕ್ರಮ ಕೈಗೊಂಡಿದ್ದಾರೆ. ರೈತ ಮಕ್ಕಳ ಕೈಗೆ ಸ್ಲೇಟ್ ನೀಡಿ ಫೋಟೊ ತೆಗೆಸಿದ್ದಕೆ ತೀವ್ರ ಆಕ್ರೋಶ ವ್ಯಕ್ತವಾಗ್ತಾಯಿದೆ. ಹಾಗೂ ಅಧಿಕಾರಿಗಳೇ ಸಾಮಾಜಿಕ ಜಾಲತಾಣಗಲ್ಲಿ ಆ ಫೋಟೋಗಳನ್ನು ವೈರಲ್ ಮಾಡಿದ್ದಾರೆ ಎನ್ನುವ ಆರೋಪ ಕೇಳಿಬರುತ್ತಿವೆ.
ಉರಳುಗಲ್ಲು ಗ್ರಾಮದ ಪ್ರಕರಣವನ್ನು ದೊಡ್ಡ ಮಟ್ಟದಲ್ಲಿ ಖಂಡಿಸಿ ದೌರ್ಜನ್ಯ ಎಸಗಿರುವ ಅಧಿಕಾರಿಗಳನ್ನು ಅಮಾನತು ಮಾಡಬೇಕೆಂದು ಆಗ್ರಹಿಸಲು ಆಗಸ್ಟ್ ೫ರಂದು ಬೃಹತ್ ಪಾದಯಾತ್ರೆ ನಡೆಯಲಿದೆ. ಬಿಳಿಗಾರಿನಿಂದ ಕಾರ್ಗಲ್ ವರೆಗೆ ೨೨ ಕಿಮಿ ಪಾದಯಾತ್ರೆಗೆ ಭರ್ಜರಿ ಸಿದ್ಧತೆ ಕೂಡ ನಡೆಯುತ್ತಿದೆ. ಜನಪರ ಹೋರಾಟ ವೇದಿಕೆ ಮತ್ತು ಕಾಗೋಡು ಜನಪರ ವೇದಿಕೆ ನೇತೃತ್ವದಲ್ಲಿ ನಡೆಯಲಿರುವ ಪಾದಯಾತ್ರೆಯಲ್ಲಿ ಇನ್ನೂ ಅನೇಕ ಹಕ್ಕೋತ್ತಾಯಗಳನ್ನು ಮಾಡಲು ಜನರು ಮುಂದಾಗಿದ್ದಾರೆ.
ಮುಚ್ಚಿರುವ ಎಂಪಿಎಂಗೆ ಮತ್ತೆ ೪೦ ವರ್ಷಗಳ ಕಾಲ ಭೂಮಿಯನ್ನು ಲೀಸ್ ನೀಡಲಾಗಿದೆ. ಆ ಭೂಮಿಯನ್ನು ಶರಾವತಿ ಸಂತ್ರಸ್ಥರಿಗೆ ನೀಡಬೇಕು. ಅರಣ್ಯ ಹಕ್ಕು ಕಾಯ್ದೆ ಅಡಿಯಲ್ಲಿ ಅರ್ಜಿ ಸಲ್ಲಿಸಿರುವ ರೈತರಿಗೆ ಹಕ್ಕುಪತ್ರ ನೀಡಬೇಕು. ದ್ವೀಪದ ಜನರಿಗೆ ಕೃಷಿ ಚಟುವಟಿಕೆ ಮಾಡಲು ಅರಣ್ಯ ಇಲಾಖೆ ಅಧಿಕಾರಿಗಳು ನೀಡ್ತಾಯಿರುವ ಕಿರುಕುಳ ಇಲ್ಲಿಗೆ ನಿಲ್ಲಬೇಕು. ಶರಾವತಿ ಸಂತ್ರಸ್ತರಿಗೆ ಉಳುಮೆ ಮಾಡೋದಕ್ಕೆ ಅವರಿರುವ ಕೆಪಿಸಿ ಒಡೆತನದ ಭೂಮಿಯನ್ನು ಶಾಶ್ವತವಾಗಿ ಅವರಿಗೆ ನೀಡಬೇಕು. ಉಳುವವನೇ ಹೊಲದೊಡೆಯ ಕಾನೂನಿನ ಮಾದರಿಯಲ್ಲಿ ಡಿ ನೋಟಿಫೈ ಮಾಡಿ ಭೂಮಿ ಮಂಜೂರು ಮಾಡಬೇಕು ಎಂಬ ಹಕ್ಕೋತ್ತಾಯಗಳನ್ನು ಮಾಡಲು ಸಿದ್ಧತೆ ನಡೆದಿದೆ. ಇದಕ್ಕೆ ಅನೇಕ ಪ್ರಮುಖರು ಸಾಥ್ ನೀಡಿದ್ದಾರೆ.
ಇನ್ನು ಇಲ್ಲಿನ ಕರೂರು ಹಾಗೂ ಬಾರಂಗಿ ಹೋಬಳಿಯ ಜನರಿಗೆ ಯಾವಾಗಲೂ ಒಂದಿಲ್ಲೊಂದು ಸಮಸ್ಯೆಗಳು ಕಾಡುತ್ತಲೇ ಇರುತ್ತವೆ. ಹಿನ್ನೀರಿನ ಆಚೆ ಇರುವ ಕುಗ್ರಾಮಗಳು ಸಂಜೆಯಾಗುತ್ತಿದ್ದಂತೆ ಹೊರಜಗತ್ತಿನೊಂದಿಗೆ ಸಂಪರ್ಕವನ್ನೇ ಕಳೆದುಕೊಳ್ಳುತ್ತವೆ. ರಾತ್ರಿ ವೇಳೆ ಆರೋಗ್ಯ ಸಮಸ್ಯೆಯಾದರೆ ಇಲ್ಲಿನ ಜನರನ್ನು ದೇವರೇ ಕಾಪಾಡಬೇಕು. ಕೆಲ ತಿಂಗಳುಗಳ ಹಿಂದೆಯಷ್ಟೆ ಸರಿಯಾದ ಸಮಯಕ್ಕೆ ಆಂಬುಲೆನ್ಸ್ ಸಿಗದೇ ಜೀವಹಾನಿ ಸಂಭವಿಸಿತ್ತು. ಇಷ್ಟೆಲ್ಲಾ ಸಮಸ್ಯೆಗಳ ಜೊತೆಗೆ ಜೀವನ ತೂಡ್ತಾಯಿರುವ ಜನರಿಗೆ ಇದೀಗ ಸಿಂಗಳೀಕ ಅಭಯಾರಣ್ಯದ ಬಫರ್ ಝೋನ್ ಘೋಷಣೆ ಮಾಡಿರುವುದು ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಹೀಗಾಗಿ ಇದನ್ನು ಕೂಡ ಪಾದಯಾತ್ರೆಯಲ್ಲಿ ಖಂಡನಾ ವಿಷಯವಾಗಿ ತೆಗೆದುಕೊಳ್ಳಲಾಗಿದೆ.
ದೇಶದಲ್ಲಿ ೫ಜಿ ತರಂಗಾಂತರಗಳ ಮಾರಟ ಪ್ರಕ್ರಿಯೆ ನಡಿಯುತ್ತಿದ್ದರೆ ಈ ಭಾಗದ ಅನೇಕ ಊರುಗಳಲ್ಲಿ ಇನ್ನೂ ಕೂಡ ಫೋನ್ ಮಾಡಲು ಸಹ ನೆಟ್‌ವರ್ಕ್ ಸಿಗ್ತಾಯಿಲ್ಲ. ಅನೇಕ ಬಾರಿ ಜನಪ್ರತಿನಿಧಿಗಳಿಗೆ ಮನವಿ ಮಾಡಿ ಬೇಸತ್ತಿದ್ದ ಜನರು ಚುನಾವಣೆ ಬಹಿಷ್ಕಾರಕ್ಕೂ ಮುಂದಾಗಿದ್ರು. ಇನ್ನು ಉರಳಗಲ್ಲು ಗ್ರಾಮದ ಯುವಕರು ವಿದ್ಯುತ್ ಸೌಕರ್ಯಕ್ಕಾಗಿ ಮರ ಕಡಿದ್ದಿದ್ದರ ಹಿಂದೆ ಬಲವಾದ ಕಾರಣವಿದೆ. ಇಲ್ಲಿನ ೫೭ ಮನೆಗಳಿಗೆ ಈಗಲೂ ವಿದ್ಯುತ್ ಸೌಕರ್ಯ ಇಲ್ಲ. ರಾತ್ರಿಯಾದರೆ ಬದುಕೇ ಬೇಡವೆನ್ನಿಸುತ್ತದೆ. ಇಷ್ಟು ವರ್ಷ ಸೀಮೆಎಣ್ಣೆ ದೀಪಗಳನ್ನು ರಾತ್ರಿ ಬಳಸ್ತಾಯಿದ್ದರು. ಆದ್ರೀಗ ಸರ್ಕಾರವೂ ಸೀಮೆಎಣ್ಣೆಯನ್ನು ಕೂಡ ವಿತರಣೆ ಮಾಡುವುದು ನಿಲ್ಲಿಸಿದ್ದು ಜನರ ಬದುಕು ಇನ್ನು ಕಠಿಣವಾಗಿದೆ.
ಅದೇನೆ ಇರಲಿ ಎಲ್ಲದಕ್ಕೋ ಒಂದು ಮಿತಿ ಅನ್ನೋದು ಇರುತ್ತೆ. ಅದು ಮೀರಿದ್ರೆ ಹೋರಾಟ, ಆಕ್ರೋಶಗಳು ಅನಿವಾರ್‍ಯವಾಗಿ ಬಿಡುತ್ತದೆ. ದ್ವೀಪ ಪ್ರದೇಶದಲ್ಲಿಯೂ ಈಗ ಅದೇ ಆಗಿರೋದು. ಜನರ ತಾಳ್ಮೆಯ ಕಟ್ಟೆ ಒಡೆದಿದ್ದು ಆಗಸ್ಟ್ ೫ರಂದು ಬೃಹತ್ ಪಾದಯಾತ್ರೆ ಹಾಗೂ ಅನಿರ್ಧಿಷ್ಟಾವಧಿ ಸತ್ಯಾಗ್ರಹ ನಡೆಸಲು ಜನರು ಮುಂದಾಗಿದ್ದಾರೆ. ಸರ್ಕಾರಕ್ಕೆ ಇನ್ನಾದರು ಈ ಜನರ ಅರಣ್ಯ ರೋಧನ ಕೇಳಿಸಲಿ. ಈ ಪ್ರದೇಶವು ಅಭಿವೃದ್ಧಿ ಹೊಂದಲಿ ಎನ್ನುವುದೇ ಎಲ್ಲರ ಆಶಯ
ನ್ಯೂಸ್ ರೂಂ ಕನ್ನಡ ಮೀಡಿಯಂ ೨೪*೭