ಜೀವಕ್ಕೆ ಏನಾದರು ತೊಂದರೆಯಾದ್ರೆ ಪೊಲೀಸರೇ ಹೊಣೆ !

ಶಿವಮೊಗ್ಗ : ನಮ್ಮ ಕುಟುಂಬದ ಮೇಲೆ ಸುಜಯಮ್ಮ, ಸತೀಶ ಹಾಗೂ ಅವರ ಸಹಚರರು ದೌರ್ಜನ್ಯ ಮಾಡುತ್ತಿದ್ದಾರೆ ಎಂದು ಸುಲೋಚನಮ್ಮ ಗಣಪತಿ ಆರೋಪ ಮಾಡಿದ್ದಾರೆ. ಈ ಕುರಿತು ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಅವರು, ನಮ್ಮ ಮಾವನವರಾದ ಬಡಗಿ ರಾಮಣ್ಣ ಶಿವಮೊಗ್ಗ ತಾಲೂಕು ಕುಂಸಿ ಹೋಬಳಿಯ ಚಿಕ್ಕದಾವನಂದಿ ಗ್ರಾಮದ ಸ.ನಂ. ೩೩ ರಲ್ಲಿ ೩,೧೪ ಗುಂಟೆ ಸ.ನಂ. ೩೫ ರಲ್ಲಿ, ೨.೩೩ ಗುಂಟೆ ಜಮೀನನ್ನು ಗೇಣಿದಾರರಾಗಿ ಸಾಗುವಳಿ ಮಾಡುತ್ತಾ ಬಂದಿದ್ದರು. ನಮ್ಮ ಮಾವನವರು ನಿಧನರಾದ ನಂತರ ಬಡಗಿ ರಾಮಣ್ಣನ ಮಗ ಗಣಪತಿ ಅಂದರೆ, ನನ್ನ ಗಂಡ ಇವರು ಭೂಮಿ ಸಾಗುವಳಿ ಮಾಡುತ್ತಾ ಬಂದಿದ್ದು, ಹಾಲೀ ನಾವುಗಳೇ ಸ್ವಾಧೀನಾನುಭವದಲ್ಲಿದ್ದೇವೆ.

ಇತ್ತೀಚೆಗೆ ಭೂ ಮಾಲೀಕರಾದ ಮಾಧವರಾವ್ ರವರ ಮಗಳಾದ ಸುಜಯಮ್ಮ ಇವರು ಕುಂಸಿ ಪೊಲೀಸ್‌ಗೆ ನಮ್ಮಗಳ ವಿರುದ್ಧ ದೂರು ನೀಡಿದ್ದರು. ನಾವುಗಳು ಸಹ ಅವರ ವಿರುದ್ಧ ಪ್ರತಿ ದೂರು ದಾಖಲಿಸಿದ್ದೆವು. ಆದ್ರೆ, ಕುಂಸಿ ಠಾಣೆ ಪೊಲೀಸರು ಜಮೀನಿಗೆ ಸಂಬಂಧಿಸಿದ ಯಾವುದೇ ದಾಖಲೆಗಳನ್ನ ಪರಿಶೀಲಿಸದೆ ನಮ್ಮ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಜಮೀನಿನ ವಿಚಾರವಾಗಿ ಶಿವಮೊಗ್ಗದ ಸಿವಿಲ್ ನ್ಯಾಯಾಲಯ ಯಥಾಸ್ಥಿತಿಯ ಆದೇಶ ನೀಡಿತ್ತು. ಆದ್ರೆ ಇವರುಗಳು ಆ ಆದೇಶ ಮೀರಿ ಜಮೀನಿನಲ್ಲಿ ಮನೆ ಕಟ್ಟಿಕೊಂಡಿದ್ದಾರೆ. ಈ ಕುರಿತಾಗಿ ದೂರು ನೀಡಲು ಹೋದರೆ ಕುಂಸಿ ಪೊಲೀಸರು ದೂರು ಸ್ವೀಕರಿಸುತ್ತಿಲ್ಲ. ಹೀಗಾಗಿ ಮುಂದಿನ ದಿನಗಳಲ್ಲಿ ನನ್ನ ಮತ್ತು ನನ್ನ ಕುಟುಂಬದವರ ಜೀವಕ್ಕೆ ಏನಾದರು ತೊಂದರೆ ಆದ್ರೆ ಅದಕ್ಕೆ ಸುಜಯಮ್ಮ, ಸತೀಶ ಹಾಗೂ ನಮಗೆ ರಕ್ಷಣೆ ನೀಡದ ಪೊಲೀಸ್ ಅಧಿಕಾರಿಗಳೇ ಹೊಣೆ ಎಂದು ನೋವು ತೋಡಿಕೊಂಡರು.