ಶಿವಮೊಗ್ಗ : ಹಿಜಾಬ್ ವಿಚಾರವಾಗಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಹಾಗೂ ಹಜ್ ಮತ್ತು ವಕ್ಫ್ ಇಲಾಖೆಯು ಹೊರಡಿಸಿರುವ ಸುತ್ತೋಲೆ ಅಸಂವಿಧಾನಿಕ ಹಾಗೂ ಕೆಲವು ಕಡೆ ಹೈಕೋರ್ಟ್‌ನ ಮಧ್ಯಂತರ ಆದೇಶವನ್ನು ದುರ್ಬಳಕೆ ಮಾಡಲಾಗುತ್ತಿದೆ ಎಂದು ಜಾಯಿಂಟ್ ಆಕ್ಷನ್ ಕಮಿಟಿಯ ಮೌಲಾನಾ ಶಾಹುಲ್ ಹಮೀದ್ ಮುಸ್ಲಿಯಾರ್ ದೂರಿದ್ರು.
ಫೆಬ್ರವರಿ 16ರಂದು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಹಾಗೂ ಹಜ್ ಮತ್ತು ವಕ್ಫ್ ಇಲಾಖೆಯು ಹೊರಡಿಸಿರುವ ಸುತೋಲೆ ಹಾಸ್ಯಾಸ್ಪದವಾಗಿದೆ. ಇದರ ಪ್ರಕಾರ ಅಲ್ಪಸಂಖ್ಯಾತ ಶಾಲಾ ಕಾಲೇಜುಗಳಲ್ಲಿ ಶೇಕಡಾ ೧೦೦ರಷ್ಟು ಮುಸ್ಲಿಂ ಸಮುದಾಯದ ಮಕ್ಕಳು ಓದುತ್ತಿದ್ದರೂ ಹಿಜಾಬ್ ನಿಷೇಧವೆಂದು ಹೇಳಲಾಗಿದೆ. ಆದ್ದರಿಂದ ಇಲಾಖೆಯ ಈ ಸುತ್ತೋಲೆ ಕಾನೂನು ಬಾಹಿರ ಹಾಗೂ ಅಸಂವಿಧಾನಿಕವಾಗಿದೆ. ಕರ್ನಾಟಕ ಹೈಕೋರ್ಟ್‌ನ ಮಧ್ಯಂತರ ಆದೇಶವನ್ನು ಸರಿಯಾಗಿ ಅರ್ಥ ಮಾಡಿಕೊಳ್ಳದೇ ಹಲವಾರು ಪದವಿ ಶಿಕ್ಷಣ ಕಾಲೇಜುಗಳಲ್ಲಿ ಮತ್ತು ಪ್ರೌಢ ಶಾಲೆಗಳಲ್ಲಿ ಮಕ್ಕಳಿಗೆ ಪ್ರವೇಶ ನೀಡುತ್ತಿಲ್ಲ. ಕೆಲವೊಂದು ಶಿಕ್ಷಣ ಸಂಸ್ಥೆಗಳಲ್ಲಿ ಅಧ್ಯಾಪಕರಿಗೂ ಸಹ ಮಧ್ಯಂತರ ಆದೇಶ ಹೇರಲಾಗುತ್ತಿದೆ. ಆದ್ದರಿಂದ ಕೂಡಲೇ ಜಿಲ್ಲಾಡಳಿತ ಈ ಗೊಂದಲಗಳನ್ನ ಬಗೆಹರಿಸಬೇಕು ಹಾಗೂ ನಗರದ ಎಲ್ಲಾ ಶಿಕ್ಷಣ ಸಂಸ್ಥೆಗಳಿಗೆ ಸೂಕ್ತ ನಿರ್ದೇಶನ ಮಾಡಬೇಕೆಂದು ಆಗ್ರಹಿಸಿದರು.