ಶಿವಮೊಗ್ಗ : ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಅಧ್ಯಕ್ಷರಾಗಿರುವ ಶೀಗಂಧ ಸಂಸ್ಥೆ ರಜತ ಮಹೋತ್ಸವದ ಸಂಭ್ರಮದಲ್ಲಿದೆ. ಈ ಹಿನ್ನೆಲೆ ಬೆಂಗಳೂರಿನ ವಿಶ್ವ ವಿಖ್ಯಾತ ಅಭಿನವ ಡ್ಯಾನ್ಸ್ ಕಂಪನಿಯಿಂದ ವಸಂತ ಸಂಭ್ರಮ ಹಾಗೂ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಹೊಸಳ್ಳಿ ಕೇಶವಮೂರ್ತಿಯವರಿಗೆ ಅಭಿನಂದನಾ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿದೆ.
ಏಪ್ರಿಲ್ 13ರಂದು ಕುವೆಂಪು ರಂಗಮಂದಿರಲ್ಲಿ ಈ ಕಾರ್ಯಕ್ರಮ ನಡೆಯಲಿದೆ. ಈ ಕುರಿತು ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಶ್ರೀಗಂಧ ಸಂಸ್ಥೆಯ ಅಧ್ಯಕ್ಷ ಕೆ.ಎಸ್.ಈಶ್ವರಪ್ಪ, ಶ್ರೀಗಂಧ ಸಂಸ್ಥೆ ರಜತ ಮಹೋತ್ಸವದ ಸಂಭ್ರಮದಲ್ಲಿದೆ. ಸಂಸ್ಥೆಯು ನಾಡಿನಾದ್ಯಂತ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಕಲಾ ರಸಿಕರಿಗೆ ಉಣಬಡಿಸುತ್ತಿದ್ದು, ತನ್ನದೇ ಆದ ಛಾಪು ಮೂಡಿಸಿದೆ. ಸಾಂಸ್ಕೃತಿಕ ನೆಲೆಗಟ್ಟಿನಲ್ಲಿ ಸದ್ಭಾವ, ಸದ್ವಿಚಾರ, ಸದಭಿರುಚಿ, ಹಾಗೂ ಸತ್ಕಾರ್ಯ ಆಧಾರಿತ ಕಾರ್ಯಕ್ರಮಗಳನ್ನು ನಡೆಸುತ್ತಾ ಕಲಾರಾಧಕರ ಮೆಚ್ಚುಗೆಗೆ ಪಾತ್ರವಾಗಿದೆ ಎಂದರು.