ಬೆಂಗಳೂರು : ಪಿಎಸ್‌ಐ ಅಕ್ರಮ ಪ್ರಕರಣದಲ್ಲಿ ಸರ್ಕಾರ ನೇರವಾಗಿ ಶಾಮೀಲಾಗಿದೆ. ಸಿಎಂ ಇದರ ಹೊಣೆಗಾರಿಕೆ ವಹಿಸಿಕೊಂಡು ರಾಜೀನಾಮೆ ಸಲ್ಲಿಸಬೇಕು. ಗೃಹ ಸಚಿವರು ಸುಳ್ಳು ಹೇಳಿದ್ದಾರೆ. ಸರ್ಕಾರದ ದಾರಿ ತಪ್ಪಿಸಿದ್ದಾರೆ. ಅವರ ವಿರುದ್ಧವೂ ಕೇಸ್ ದಾಖಲಾಗಬೇಕು. ಕೂಡಲೇ ಸರ್ಕಾರ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ವಹಿಸಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆಗ್ರಹಿಸಿದ್ದಾರೆ.
ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಜೊತೆ ಜಂಟಿ ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಅವರು, ಕೆಲ ವಿಚಾರವಾಗಿ ರಾಜ್ಯದ ಆಡಳಿತಕ್ಕೆ ಕಪ್ಪು ಚುಕ್ಕೆ ಬಂದಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅಸಮಾಧಾನ ವ್ಯಕ್ತಪಡಿಸಿದರು.
ಇನ್ನು ವಿಪಕ್ಷ ನಾಯಕ ಸಿದ್ದರಾಮಯ್ಯ ಮಾತನಾಡಿ ರಾಜ್ಯದಲ್ಲಿ ಲಂಚ, ಹಗರಣಗಳು ಮುಗಿಲು ಮುಟ್ಟಿವೆ. ಎಸಿಬಿಯನ್ನು ಭ್ರಷ್ಟಾಚಾರದ ಕೂಪ ಮಾಡಲಾಗಿದೆ. ಮಾಜಿ ಸಿಎಂ ಯಡಿಯೂರಪ್ಪರ ಪುತ್ರ ವಿಜಯೇಂದ್ರ, ಸಚಿವ ಅಶ್ವತ್ಥ್ ನಾರಾಯಣ ಪಿಎಸ್‌ಐ ಪ್ರಕರಣದಲ್ಲಿ ನೇರವಾಗಿ ಶಾಮೀಲಾಗಿದ್ದಾರೆ ಎಂಬ ಆರೋಪ ಇದೆ. ಅಶ್ವತ್ಥ್ ನಾರಾಯಣ ಅವರ ಸಂಬಂಧಿಕರಾದ ಐವರು ಅಂಕ ತಿದ್ದುಪಡಿ ಮಾಡಿಕೊಂಡು ಆಯ್ಕೆಯಾಗಿದ್ದಾರೆ. ಸಿಎಂ ಇವರ ಪೋಷಣೆ ಮಾಡುತ್ತಿದ್ದಾರೆ ಎಂದು ಸಿದ್ದರಾಮಯ್ಯ ಆರೋಪಿಸಿದರು.