ಆತ್ಮರಕ್ಷಣೆಗೆ ಆರೋಪಿಯ ಕಾಲಿಗೆ ಗುಂಡೇಟು

ಶಿವಮೊಗ್ಗ : ತುಂಗಾ ನಗರ ಪೊಲಿಸ್ ಇನ್ಸ್‌ಪೆಕ್ಟರ್ ಮಂಜುನಾಥ್  ತಮ್ಮ ಹಾಗೂ ತಮ್ಮ ಸಿಬ್ಬಂದಿಯ ಆತ್ಮರಕ್ಷಣೆಗಾಗಿ ಆರೋಪಿಯೊಬ್ಬನ ಬಲಗಾಲಿಗೆ ಗುಂಡು ಹಾರಿಸಿದ್ದಾರೆ.

ಶಿವಮೊಗ್ಗದ ಬುದ್ದಾನಗರದ ಹರ್ಷದ್ ಅಲಿಯಾಸ್ ಜಾಮೂನ್ ಎನ್ನುವವನ ಮೇಲೆ ಜಿಲ್ಲೆಯಲ್ಲಿ ಮಾರಣಾಂತಿಕ ಹಲ್ಲೆ, ಮನೆಗಳ್ಳತನ ಮತ್ತು ದರೋಡೆ ಪ್ರಕರಣಗಳು ಸೇರಿದಂತೆ ಒಟ್ಟು 5 ಪ್ರಕರಣಗಳು ದಾಖಲಾಗಿವೆ. ಮಾರಣಾಂತಿಕ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ 2017ರಲ್ಲಿ ಆರೋಪಿಗೆ ನ್ಯಾಯಾಲಯವು 10 ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿತ್ತು.

ನಂತರ ಆರೋಪಿ ಹರ್ಷದ್ ಸುಪ್ರಿಂಕೋರ್ಟ್‌ನಿಂದ ಜಾಮೀನು ಪಡೆದು ಹೊರಬಂದಿದ್ದ. ಜೂನ್ 1 ರಂದು ತುಂಗಾನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವ್ಯಕ್ತಿಯೊಬ್ಬರಿಗೆ ಹಣ ನೀಡುವಂತೆ ಚಾಕು ತೋರಿಸಿ ಬೆದರಿಕೆ ಹಾಕಿದ್ದಾಗಿ ಈತನ ಮೇಲೆ ದೂರು ದಾಖಲಾಗಿತ್ತು. ದೂರಿಗೆ ಸಂಬಂಧಿಸಿದಂತೆ ಪೊಲೀಸರು ಕಾರ್ಯಾಚರಣೆ ನಡೆಸುತ್ತಿರುವಾಗ ಆರೋಪಿಯು ಪೊಲೀಸ್ ಸಿಬ್ಬಂದಿಯ ಮೇಲೆ ಚಾಕುವಿನಿಂದ ಹಲ್ಲೆ ಮಾಡಿ ರಕ್ತ ಬರುವಂತೆ ಗಾಯ ಪಡಿಸಿದ್ದಾನೆ. ಈ ವೇಳೆ ಪೊಲೀಸ್ ಇನ್ಸ್‌ಪೆಕ್ಟರ್ ತಮ್ಮ ಹಾಗೂ ತಮ್ಮ ಸಿಬ್ಬಂದಿಯ ಆತ್ಮರಕ್ಷಣೆಗಾಗಿ ಆರೋಪಿ ಹರ್ಷದ್‌ನ ಬಲಗಾಲಿಗೆ ಗುಂಡು ಹಾರಿಸಿದ್ದಾರೆ. ನಂತರ ಗಾಯಗೊಂಡ ಆರೋಪಿಯನ್ನು ವೈದ್ಯಕೀಯ ಚಿಕಿತ್ಸೆಗಾಗಿ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿರುತ್ತದೆ.