ಶಿವಮೊಗ್ಗ ದಸರಾಗೆ ಅದ್ಧೂರಿ ಆರಂಭ

ಹೈಲೆಟ್ಸ್:

ಶಿವಮೊಗ್ಗದ ದಸರಾ ಮಹೋತ್ಸವ  ೨೦೨೨

ಶ್ರೀ ಚಾಮುಂಡೇಶ್ವರಿ ದೇವಿಯ ಉತ್ಸವಮೂರ್ತಿ ಪ್ರತಿಷ್ಠಾಪನೆ 

ಪದ್ಮಶ್ರಿ ಪ್ರಶಸ್ತಿ ಪುರಸ್ಕೃತರಾದ ತುಳಸಿಗೌಡರಿಂದ ಉದ್ಘಾಟನೆ

ಶಿವಮೊಗ್ಗ: ಶಿವಮೊಗ್ಗದ ದಸರಾಗೆ ಅದ್ಧೂರಿ ಆರಂಭ ಸಿಕ್ಕಿದೆ. ಮೈಸೂರು ದಸರಾವನ್ನ ವಿಜೃಂಭಣೆಯಿಂದ ಆಚರಣೆ ಮಾಡಲಾಗುತ್ತದೆ. ಅದನ್ನ ಬಿಟ್ಟರೆ ಶಿವಮೊಗ್ಗದ ದಸರಾವೂ ಅಷ್ಟೇ ವೈಭವದಿಂದ ಆರಂಭವಾಗಿದೆ. ಬೆಳಗ್ಗೆ ತಾಯಿ ಚಾಮುಂಡೇಶ್ವರಿ ದೇವಿಯ ಉತ್ಸವ ಮೂರ್ತಿಯ ಮೆರವಣಿಗೆಯನ್ನು ನಡೆಸಲಾಯ್ತು.

ಮಹಾನಗರ ಪಾಲಿಕೆಯ ಆವರಣದಿಂದ ಕೋಟೆ ಶ್ರೀ ಚಂಡಿಕಾ ದುರ್ಗಾ ಪರಮೇಶ್ವರಿ ದೇಗುಲದ ವರೆಗೂ ಮೆರವಣಿಗೆ ಸಾಗಿತು. ಈ ಮೆರವಣಿಗೆಯಲ್ಲಿ ಮಹಾನಗರ ಪಾಲಿಕೆಯ ಮೇಯರ್ ಸುನೀತಾ ಅಣ್ಣಪ್ಪ, ವಿಪಕ್ಷ ನಾಯಕ ರೇಖಾ ರಂಗನಾಥ್ ಸೇರಿದಂತೆ ಪಾಲಿಕೆ ಸದಸ್ಯರು ಪಾಲ್ಗೊಂಡಿದ್ದರು. ತಾಳಮೇಳಗಳ ಸದ್ದಿನೊಂದಿಗೆ ಅದ್ಧೂರಿಯಾಗಿ ಮೆರವಣಿಗೆ ಸಾಗಿತು. 
 
ಕೋಟೆಯ ದುರ್ಗಾ ಪರಮೇಶ್ವರಿ ದೇಗುಲದ ಮುಂಭಾಗದಲ್ಲಿ ತಾಯಿ ಚಾಮುಂಡೇಶ್ವರಿ ದೇವಿಯ ಮೂರ್ತಿ ಪ್ರತಿಷ್ಠಾಪನೆ ಮಾಡಲಾಯ್ತು. ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ, ಮೇಯರ್ ಸುನೀತಾ ಅಣ್ಣಪ್ಪ, ಆಡಳಿತ ಪಕ್ಷದ ನಾಯಕ ಚನ್ನಬಸಪ್ಪ, ಪದ್ಮಶ್ರೀ ಪುರಸ್ಕೃತರಾದ ವೃಕ್ಷಮಾತೆ ತುಳಸಿಗೌಡ ಅವರು ದೇವಿಗೆ ಪೂಜೆ ಸಲ್ಲಿಸಿದರು.

ಬಳಿಕ ವೇದಿಕೆಯ ಕಾರ್ಯಕ್ರಮದಲ್ಲಿ ಶಿವಮೊಗ್ಗದ ದಸರಾಗೆ ದೀಪ ಬೆಳಗುವುದರ ಮೂಲಕ ಚಾಲನೆ ನೀಡಲಾಯ್ತು. ಈ ಬಾರಿಯ ದಸರಾ ವಿಶೇಷ ಅಂದ್ರೆ ದೇವಿಗೆ ಬಂಗಾರದ ಕಿರೀಟ ಧಾರಣೆ ಮಾಡಲಾಗುತ್ತದೆ. ವೇದಿಕೆಯ ಕಾರ್ಯಕ್ರಮದಲ್ಲಿ ಪಾಲಿಕೆ ಆಡಳಿತ ಪಕ್ಷದ ನಾಯಕ ಚನ್ನಬಸಪ್ಪ ಅವರು ಈ ವಿಷ್ಯವನ್ನು ಘೋಷಣೆ ಮಾಡಿದರು.