ಹೈಲೆಟ್ಸ್:
ಸಾಗರ ತಾಲೂಕಿನ ಸರಕಾರಿ ಶಾಲೆಯಲ್ಲಿ ಸೀರೆ ಶೌಚಾಲಯ
ಏಳಿಗೆ ಗ್ರಾಮದ ಕಿರಿಯ ಪ್ರಾಥಮಿಕ ಶಾಲೆಯ ಅವ್ಯವಸ್ಥೆ
ಕಣ್ಮುಚ್ಚಿ ಕುಳಿತ ಶಿಕ್ಷಣ ಇಲಾಖೆ ಅಧಿಕಾರಿಗಳು
ಹೀಗೆ ಮಾಡಿದ್ರೆ ಸರಕಾರಿ ಶಾಲೆಗಳು ಉಳಿಯುತ್ತವಾ..?
ಸಾಗರ:
ತುಮರಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಏಳಿಗೆ ಗ್ರಾಮವು ಶರವಾತಿ ಹಿನ್ನೀರಿನಲ್ಲಿರುವ ಪ್ರದೇಶ. ಇಲ್ಲಿನ ಕಿರಿಯ ಪ್ರಾಥಮಿಕ ಶಾಲೆಯು ಅವ್ಯವಸ್ಥೆಯಿಂದ ಕೂಡಿದೆ. ಇಲ್ಲಿ ಹೇಳೋರಿಲ್ಲ.. ಕೇಳೋರೂ ಇಲ್ಲ... ಶಿಕ್ಷಣ ಇಲಾಖೆಯ ಅಧಿಕಾರಿಗಳು ತಲೆ ಕೆಡಿಸಿಕೊಂಡಿಲ್ಲ. ಅಷ್ಟಕ್ಕೂ ಈ ಶಾಲೆಯಲ್ಲಿ ಏನಾಗಿದೆ ಅಂತ ನೀವು ಕೇಳಬಹುದು. ಅಂದ್ಹಾಗೆ ಈ ಶಾಲೆಯ ಶೌಚಾಲಯದ ಬಾಗಿಲು ಮುರಿದು ಹೋಗಿದೆ. ಅದನ್ನು ದುರಸ್ಥಿ ಮಾಡಿಸಬೇಕಾದ ಇಲಾಖೆಯವರು, ಕೈಕಟ್ಟಿ ಕುಳಿತುಕೊಂಡಿದ್ದಾರೆ.
ಬಾಗಿಲು ಮುರಿದಿರೋದ್ರಿಂದ ಸೀರೆಯನ್ನು ಕಟ್ಟಿರೋದು ಇಡೀ ರಾಜ್ಯಾದ್ಯಂತ ಈ ಪ್ರಕರಣ ತೀವ್ರ ಚರ್ಚೆಗೆ ಗ್ರಾಸವಾಗುವಂತೆ ಮಾಡಿದೆ. ಶಾಲಾ ಕಟ್ಟಡ ದುಸ್ಥಿತಿಯಲ್ಲಿ ಇದೆ. ಕಾಯಂ ಶಿಕ್ಷಕರು ಇಲ್ಲ, ಶುದ್ಧ ನೀರಿನ ಕೊರತೆ ಕೂಡ ಇದೆ. ಗುಡ್ಡದಿಂದ ಹರಿಯುವ ನೀರಿನಲ್ಲಿ ಅಡುಗೆ ಮಾಡಬೇಕಾದ ಪರಿಸ್ಥಿತಿ ಇದೆ. ವಿದ್ಯಾರ್ಥಿಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಇಳಿ ಮುಖವಾಗುತ್ತಲೇ ಇದೆ. ಸರಕಾರಿ ಅಧಿಕಾರಿಗಳು ಮಾತ್ರ ಗಪ್‌ಚುಪ್ ಆಗಿದ್ದಾರೆ. ಸರಕಾರಿ ಶಾಲೆ ಉಳಿಸಬೇಕು.. ಸರಕಾರಿ ಶಾಲೆ ಉಳಿಸಬೇಕು ಅಂತ ಬೊಬ್ಬೆ ಹೊಡೆದುಕೊಳ್ಳುತ್ತಾರೆ. ಆದ್ರೆ, ಸರಕಾರಿ ಶಾಲೆ ಉಳಿಸೋದಕ್ಕೆ ಏನ್ ಮಾಡಬೇಕು ಅನ್ನೋದು ಸರಕಾರಕ್ಕೆ ಗೊತ್ತಾಗೋದಿಲ್ವಾ..? ನಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸೋದು ಹೇಗೆ ಎಂದು ಪೋಷಕರು ಗೋಳಾಡುತ್ತಿದ್ದಾರೆ.