ಸಾಗರ:
ಪೋತರಾಜನ ಅಬ್ಬರ.. ಜನರ ಶ್ರದ್ಧಾ ಭಕ್ತಿ... ನೂರಾರು ಸಂಖ್ಯೆಯಲ್ಲಿ ಜಮಾಯಿಸಿರುವ ಜನರು... ಮಾರಿಕಾಂಬ ದೇವಿಗೆ ವಿಶೇಷ ಪೂಜೆ... ದೇವಿ ವಿಗ್ರಹ ತಯಾರಿಕೆಗೆ ಮರ ಕಡಿಯುವ ಶಾಸ್ತ್ರ... ಈ ಎಲ್ಲಾ ದೃಶ್ಯಗಳಿಗೆ ಸಾಕ್ಷಿಯಾಗಿದ್ದು ಸಾಗರ ನಗರ
ಸಾಗರದಲ್ಲಿ ಮೂರು ವರ್ಷಗಳಿಗೊಮ್ಮೆ ನಡೆಯುವ ಮಾರಿ ಜಾತ್ರೆಯು ಕರ್ನಾಟದಲ್ಲಿ ಎರಡನೇ ಅತಿ ದೊಡ್ಡ ಜಾತ್ರೆ ಎಂಬ ಹೆಗ್ಗಳಿಕೆಯನ್ನು ಪಡೆದುಕೊಂಡಿದೆ. ಮುಂಬರುವ ೨೦೨೩ರ ಪೆಬ್ರವರಿ ೭ರಂದು ಅದ್ದೂರಿ ಜಾತ್ರಾ ಮಹೋತ್ಸವಕ್ಕೆ ಸಾಗರ ಮತ್ತೊಮ್ಮೆ ಸಜ್ಜಾಗುತ್ತಿದ್ದು ಪೆಬ್ರವರಿ ೧೫ರ ತನಕ ಅದ್ದೂರಿ ಜಾತ್ರೆ ನಡೆಯಲಿದೆ. ಇದಕ್ಕೂ ಮುನ್ನ ಅನೇಕ ಧಾರ್ಮಿಕ ಕಾರ್ಯಗಳು ನಡೆಯಲಿವೆ. ಜನವರಿ ೩೧ರಂದು ಜಾತ್ರೆಗೆ ಅಂಕೆ ಹಾಕುವ ಕಾರ್ಯಕ್ರಮವಿದೆ. ಹಾಗೇನೆ ಜಾತ್ರೆ ಧಾರ್ಮಿಕ ಆಚರಣೆಯ ಅಂಗವಾಗಿ ಮರ ಕಡಿಯುವ ಶಾಸ್ತ್ರ ಸಾಗರದಲ್ಲಿ ನಿರ್ವಿಘ್ನವಾಗಿ ಜರುಗಿದೆ.
ರಾಜ್ಯ, ದೇಶ ನಾಡಿನ ಸಮಸ್ತ ಜನತೆಗೆ ಒಳ್ಳೆಯದಾಗಲಿ ಎಂದು ದೇವಿಯಲ್ಲಿ ಪ್ರಾರ್ಥಿಸಿ, ಮಾರಿಕಾಂಬ ದೇವಿಗೆ ವಿಶೇಷ ಪೂಜೆಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಬಳಿಕ ದೇವಿಯ ವಿಗ್ರಹ ತಾಯಾರಿಕೆಗೆ ಮರ ಹುಡುಕುವ ಕಾರ್ಯ ಧಾರ್ಮಿಕ ಕಾರ್ಯ ನಡೆಯಿತು. ನೂರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಸಾಗರದ ಪ್ರಮುಖ ರಸ್ತೆಗಳಲ್ಲಿ ಸಾಗಿದರು. ಚಾಟಿ ಏಟಿನಿಂದ ಹೊಡೆದುಕೊಳ್ಳುತ್ತ ಸಾಗಿದ್ದ ಪೋತರಾಯ ಮೆರವಣಿಗೆಯ ಆಕರ್ಷಣೆಯಾಗಿತ್ತು.
ಈ ದಿನದಂದು ಕಡಿದ ಮರದಿಂದ ದೇವಿಯ ವಿಗ್ರಹವನ್ನು ತಯಾರಿಸಲಾಗುತ್ತದೆ. ಜಾತ್ರೆಯ ದಿನದಂದು ಅಲಂಕಾರಿಕ ಮೂರ್ತಿಯ ಜೊತೆಗೆ ಈ ವಿಗ್ರಹವನ್ನು ಪೂಜಿಸಲಾಗುತ್ತದೆ. ಮಾರಿ ಜಾತ್ರೆಯ ಅಂಗವಾಗಿ ನಡೆದ ಮರ ಕಡಿಯುವ ಕಾರ್ಯಕ್ರಮದಲ್ಲಿ ಸಾಗರದ ಹಿರಿಯ ನಾಯಕ, ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಹಾಗೂ ಅವರ ಪುತ್ರಿ ರಾಜನಂದಿನಿ ಸೇರಿದಂತೆ ಅಪಾರ ಸಂಖ್ಯೆಯ ಭಕ್ತವೃಂದ ಭಾಗಿಯಾಗಿ ದೇವರ ಕೃಪೆಗೆ ಪಾತ್ರರಾದರು. ಮಾರಿಕಾಂಬ ನಾಗೇಂದ್ರ ಕಾರ್ಯದರ್ಶಿ ಗಿರಿಧರ ಭಟ್ಟ, ಸುಂದರ ಸಿಂಗ್ ಉಪಾಧ್ಯಕ್ಷರು ಸಹ ಕಾರ್ಯದರ್ಶಿ ಆನಂದ ಎಂ ಡಿ ಹಾಗೂ ಮಾರಿಕಾಂಬ ಸಮಿತಿಯ. ಧರ್ಮರಾಜ್ ಮತ್ತು ಅನೇಕ ಭಕ್ತರು ಜಾತಾ ಸಮಿತಿಯ ಸದಸ್ಯರು ಹಾಜರಿದ್ದರು.
ಒಟ್ಟಾರೆ ಮುಂದಿನ ವರ್ಷ ನಡೆಯುವ ಸಾಗರ ಮಾರಿ ಜಾತ್ರೆಯ ಧಾರ್ಮಿಕ ಕಾರ್ಯಗಳಿಗೆ ಚಾಲನೆ ಸಿಕ್ಕಾಗಿದೆ. ಸಾಗರ ಹಾಗೂ ನಾಡಿನ ಮೂಲೆ ಮೂಲೆಯಿಂದ ಆಗಮಿಸುವ ಭಕ್ತರು ಅದ್ದೂರಿಯಾಗಿ ನಡೆಯುವ ಜಾತ್ರೆಯನ್ನು ಕಣ್ಣು ತುಂಬಿಕೊಳ್ಳಲು ದಿನಗಣನೆ ಆರಂಭವಾಗಿದೆ. ಸಾವಿರಾರು ಜನರು ಸೇರುವ ಈ ಜಾತ್ರೆಯ ಸಹ ಇದೇ ರೀತಿ ನಿರ್ವಿಘ್ನವಾಗಿ ನಡೆಯಲಿ ಎಂದು ಎಲ್ಲರು ಮಾರಮ್ಮನನ್ನು ಪ್ರಾರ್ಥಿಸಿಕೊಂಡಿದ್ದಾರೆ.