ಮುಚ್ಚಿರುವ ಕನ್ನಡ ಶಾಲೆಗಳನ್ನ ಪುನಾರಂಭಿಸಬೇಕು 

ಶಿವಮೊಗ್ಗ : ಜಿಲ್ಲೆಯಲ್ಲಿ ಮುಚ್ಚಿರುವ ಹಾಗೂ ಮುಚ್ಚಿಸುತ್ತಿರುವ ಕನ್ನಡ ಸರ್ಕಾರಿ ಶಾಲೆಗಳನ್ನ ಪುನರ್ ಆರಂಭಿಸುವಂತೆ ಜಿಲ್ಲಾಡಳಿತವನ್ನ ಶಿವಮೊಗ್ಗ ಕನ್ನಡ ಸಾಹಿತ್ಯ ಪರಿಷತ್ ಒತ್ತಾಯಿಸಿದೆ. ಜಿಲ್ಲೆಯಲ್ಲಿ ಕನ್ನಡ ಮಾಧ್ಯಮ ಸರ್ಕಾರಿ ಶಾಲೆಗಳನ್ನು ಮುಚ್ಚಿಸುವ ವ್ಯವಸ್ಥಿತ ಹುನ್ನಾರ ನಡೆಯುತ್ತಿರುವುದರ ಬಗ್ಗೆ ದೂರುಗಳು ಬರುತ್ತಿವೆ.

ಈಗಾಗಲೇ ಜಿಲ್ಲೆಯಲ್ಲಿ ಮೂವತ್ತೈದಕ್ಕೂ ಹೆಚ್ಚು ಶಾಲೆಗಳು ಮುಚ್ಚಿರುವ ಮಾಹಿತಿ ಕೇಳಬರುತ್ತಿದೆ. ಸರ್ಕಾರಿ ಶಾಲೆಗಳು ಎಲ್ಲಾ ರೀತಿಯ ಸೌಲಭ್ಯ ಹೊಂದಿದ್ದರೂ ಜನರ ವಿಶ್ವಾಸಕ್ಕೆ ಹತ್ತಿರವಾಗುವಲ್ಲಿ ವಿಫಲವಾಗುತ್ತಿವೆ. ಈ ಸಮಸ್ಯೆಯನ್ನ ಗುರುತಿಸುವ ಪ್ರಯತ್ನಗಳು ಆಗಬೇಕು. ಜನರಿಗೆ ಸರ್ಕಾರಿ ಶಾಲೆಗಳು, ಕನ್ನಡ ಮಾಧ್ಯಮದ ವಿಚಾರವಾಗಿ ಅರಿವುಂಟು ಮಾಡುವ ಯೋಜನೆಗಳನ್ನ ರೂಪಿಸಬೇಕು. ಈ ಕುರಿತು ಇಲಾಖೆಯವರು ವ್ಯವಸ್ಥಿತವಾಗಿ ಕಾರ್ಯಪ್ರವೃತ್ತರಾಗಲು ಜಿಲ್ಲಾಡಳತ ಅಗತ್ಯ ಸೂಚನೆ ನೀಡಬೇಕು. ಹಾಗಯೇ ಮುಂದಿನ ಶೈಕ್ಷಣಿಕ ವರ್ಷಕ್ಕೆ ಮುಚ್ಚಿರುವ ಎಲ್ಲಾ ಶಾಲೆಗಳನ್ನು ತೆರೆಯಬೇಕು. ಇದಕ್ಕೆ ಬೇಕಾದ ಅಗತ್ಯ ಸಿದ್ಧತೆಯನ್ನ ಜಿಲ್ಲಾಡಳಿತ ಮಾಡಿಕೊಳ್ಳಬೇಕೆಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಒತ್ತಾಯಿಸಿದೆ.