ಶಿವಮೊಗ್ಗ : ಒಂದೊಂದು ಮನೆಗೆ ಮೂರು ಸಾವಿರ, ನಾಲ್ಕು ಸಾವಿರ, 7 ಸಾವಿರ ನೀರಿನ ಬಿಲ್ ಕೊಟ್ಟು ಇಡೀ ರಾಜ್ಯದಲ್ಲಿಯೇ ಚರ್ಚೆಗೆ ಗ್ರಾಸವಾಗಿದ್ದು ಶಿವಮೊಗ್ಗದ ಜಲ ಮಂಡಳಿಯ ಅಧಿಕಾರಿಗಳು. ಒಂದು ತಿಂಗಳ ಒಳಗೆ ಎಲ್ಲವನ್ನೂ ಸರಿ ಪಡಿಸ್ತೀವಿ ಅಂತ ಹೇಳಿದವರು ಇದೀಗ ಕೈ ಎತ್ತಿದ್ದಾರೆ. ಮೂರು ತಿಂಗಳಾಗ್ತಾ ಬಂದ್ರೂ ಅವೈಜ್ಞಾನಿಕ ಬಿಲ್ ಸರಿಪಡಿಸಿಲ್ಲ. ಹಾಗಾಗಿ ಶಿವಮೊಗ್ಗದ 24*7 ಕುಡಿಯುವ ನೀರಿನ ಯೋಜನೆಯ ಲೋಪಗಳ ವಿರುದ್ಧ ಶಿವಮೊಗ್ಗ ನಾಗರೀಕ ಹಿತರಕ್ಷಣಾ ವೇದಿಕೆಗಳ ಒಕ್ಕೂಟ ಶಾಸಕ ಕೆ.ಎಸ್. ಈಶ್ವರಪ್ಪರ ಕಚೇರಿಯ ಎದುರು ಪ್ರತಿಭಟನೆ ನಡೆಸಿತು.
ಕುಡಿಯುವ ನೀರಿನ ಶುಲ್ಕವನ್ನು ಅವೈಜ್ಞಾನಿಕವಾಗಿ ವಿಧಿಸಲಾಗುತ್ತಿದ್ದು ಸಂಬಂಧ ಪಟ್ಟ ಅಧಿಕಾರಿಗಳು ಹಾಗೂ ನಾಗರೀಕರನ್ನೊಳಗೊಂಡ ಸಭೆಯನ್ನು ನಡೆಸಬೇಕೆಂದು ಶಾಸಕರಾದ ಕೆ.ಎಸ್.ಈಶ್ವರಪ್ಪಗೆ ಮನವಿ ಸಲ್ಲಿಸಲಾಗಿತ್ತು. ಈ ರೀತಿ ಎರಡು ಬಾರಿ ಮನವಿ ಸಲ್ಲಿಸಿದರು ಕೂಡ ಯಾವುದೇ ಸಭೆಯನ್ನು ಶಾಸಕರು ಕರೆದಿಲ್ಲ ಎಂದು ಆರೋಪಿಸಿ ನಾಗರೀಕ ಹಿತರಕ್ಷಣ ವೇದಿಕೆಯಿಂದ ಶಾಸಕರ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿ, ತಮ್ಮ ಆಕ್ರೋಶವನ್ನು ಹೊರ ಹಾಕಿದರು.