ಶಿವಮೊಗ್ಗ : ಎಂಇಎಸ್ ಸಂಘಟನೆಯನ್ನ ನಿಷೇಧಿಸಬೇಕು ಹಾಗೂ ಅಲ್ಲಿ ನಡೆದಿರುವ ಘಟನೆಗಳ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸಬೇಕೆಂದು ಅಖಿಲ ಭಾರತೀಯ ವೀರಶೈವ ಮಹಾಸಭಾ ಆಗ್ರಹಿಸಿದೆ. ಬೆಳಗಾವಿಯಲ್ಲಿ ಜಗಜ್ಯೋತಿ ಬಸವೇಶ್ವರ ಪುತ್ಥಳಿಗೆ ಮರಾಠ ಏಕೀಕರಣ ಸಮಿತಿ ಮಸಿ ಬಳಿದಿದೆ. ಅಲ್ಲದೆ ಸಂಗೊಳ್ಳಿ ರಾಯಣ್ಣನ ಪ್ರತಿಮೆ ಭಗ್ನಗೊಳಿಸಿ, ಕನ್ನಡಿಗರ ಬಾವುಟ ಸುಟ್ಟು ವಿಕೃತಿ ಮೆರೆದಿದೆ.
ಈ ಘಟನೆಗಳನ್ನ ಖಂಡಿಸಿ ಅಖಿಲ ಭಾರತ ವೀರಶೈವ ಮಹಾಸಭಾದಿಂದ ಪ್ರತಿಭಟನೆ ನಡೆಸಲಾಗಿದೆ. ಗಾಂಧಿ ಪಾರ್ಕ್‌ನ ಪ್ರವೇಶ ದ್ವಾರದಲ್ಲಿರುವ ಬಸವೇಶ್ವರ ಪುತ್ಥಳಿಗೆ ಹೂವಿನ ಮಾಲೆ ಹಾಕಿದ ಬಸವ ಕೇಂದ್ರದ ಬಸವ ಮರುಳ ಸಿದ್ದೇಶ್ವರ ಸ್ವಾಮಿಗಳು ಪ್ರತಿಭಟನೆಗೆ ಚಾಲನೆ ನೀಡಿದರು. ಇಲ್ಲಿಂದ ಜಿಲ್ಲಾಧಿಕಾರಿಗಳ ಕಚೇರಿಯ ವರೆಗೆ ಮೆರವಣಿಗೆ ನಡೆಸಿ ನಂತರ ಜಿಲ್ಲಾಧಿಕಾರಿಗೆ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಮನವಿ ಸಲ್ಲಿಸಿದರು.