ಬೆಳಗಾವಿಯಲ್ಲಿ ನಡೆದ ಘಟನೆಗಳನ್ನ ಖಂಡಿಸಿ ವಿವಿಧ ಸಂಘಟನೆಗಳಿಂದ ಪ್ರತಿಭಟನೆ

ಜಯಕರ್ನಾಟಕ ಸಂಘಟನೆಯ ಮಹಿಳಾ ಘಟಕದಿಂದ ಪ್ರತಿಭಟನೆ

ಬೆಳಗಾವಿಯಲ್ಲಿ ನಡೆದ ಘಟನೆಗೆ ಸಂಬಂಧಪಟ್ಟಂತೆ ಎಂಇಎಸ್ ಹಾಗೂ ಶಿವಸೇನೆಯ ಕಿಡಿಗೇಡಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಜಯಕರ್ನಾಟಕ ಸಂಘಟನೆಯ ಮಹಿಳಾ ಘಟಕದಿಂದ ಪ್ರತಿಭಟನೆ ನಡೆಸಲಾಯಿತು. ಜಿಲ್ಲಾಧಿಕಾರಿ ಆವರಣದಲ್ಲಿ ನಡೆದ ಪ್ರತಿಭಟನೆಯ ವೇಳೆ ಮಾತನಾಡಿದ ಜಯಕರ್ನಾಟಕ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ನಾಜೀಮಾ, ಕನ್ನಡ ಧ್ವಜವನ್ನ ಸುಟ್ಟು ಹಾಕಿರುವ ಎಂಇಎಸ್ ಸಂಘಟನೆಯನ್ನ ನಿಷೇಧಿಸಬೇಕು. ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಹಾನಿ ಮಾಡಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು. ಇಂದು ಅವರು ಕನ್ನಡ ಧ್ವಜವನ್ನ ಸುಟ್ಟು ಹಾಕಿದ್ದಾರೆ. ಮುಂದಿನ ದಿನಗಳಲ್ಲಿ ನಮಗೆ ಏನು ಮಾಡುವುದಕ್ಕೂ ಅವರು ಹೇಸುವುದಿಲ್ಲ ಎಂದು ಆತಂಕ ವ್ಯಕ್ತಪಡಿಸಿದರು.

 

ರಾಜ್ಯ ನಾಗರೀಕ ರಕ್ಷಣಾ ಸಮಿತಿ ವತಿಯಿಂದ ಪ್ರತಿಭಟನೆ

ರಾಜ್ಯದಲ್ಲಿ ಎಂಇಎಸ್ ಸಂಘಟನೆ ನಿಷೇಧಿಸಬೇಕೆಂದು ರಾಜ್ಯ ನಾಗರೀಕ ರಕ್ಷಣಾ ಸಮಿತಿ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಲಾಯಿತು. ಬೆಳಗಾವಿಯಲ್ಲಿ ಕನ್ನಡ ಧ್ವಜವನ್ನ ಸುಟ್ಟು ಹಾಕಿರುವುದು ಹಾಗೂ ಸಂಗೊಳ್ಳಿ ರಾಯಣ್ಣನ ಪ್ರತಿಮೆಯನ್ನ ಹಾನಿ ಮಾಡಿರುವುದು ಕನ್ನಡಿಗರಿಗೆ ಅತೀವ ಬೇಸರ ಉಂಟುಮಾಡಿದೆ. ಎಂಇಎಸ್ ಕರ್ನಾಟಕ ರಾಜ್ಯದಲ್ಲಿ ಹಿಂದಿನಿಂದಲೂ ಇಂತಹ ಕೃತ್ಯಗಳನ್ನ ನಡೆಸಿಕೊಂಡು ಬರ್‍ತಾಯಿದೆ. ಹೀಗಾಗಿ ಈ ಕೂಡಲೇ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಂಡು ಈ ಸಂಘಟನೆಯನ್ನ ಕರ್ನಾಟಕದಲ್ಲಿ ನಿಷೇಧಿಸಬೇಕೆಂದು ಪ್ರತಿಭಟನಕಾರರು ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ಪತ್ರ ಸಲ್ಲಿಸಿ ಆಗ್ರಹಿಸಿದ್ದಾರೆ. 

 

ಶಾಶ್ವತಿ ಮಹಿಳಾ ವೇದಿಕೆಯಿಂದ  ಪ್ರತಿಭಟನೆ

ಎಂಇಎಸ್‌ನವರಿಂದ ನಾಡ ಧ್ವಜಕ್ಕೆ ಅವಮಾನ ಹಾಗೂ ಸ್ವಾತಂತ್ರ್ಯ ಹೋರಾಟಗಾರ, ಯುವಜನಾಂಗಕ್ಕೆ ಮಾದರಿಯಾಗಿರುವ ಸಂಗೊಳ್ಳಿ ರಾಯಣ್ಣನವರ ಪ್ರತಿಮೆಗೆ ಹಾನಿ ಮಾಡಿರುವುದನ್ನ ಖಂಡಿಸಿ ಶಾಶ್ವತಿ ಮಹಿಳಾ ವೇದಿಕೆಯಿಂದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಲಾಯಿತು. ಎಂಇಎಸ್‌ನವರು ನಾಡ ಧ್ವಜವನ್ನ ಸುಟ್ಟು ಕಾಲಿನಿಂದ ತುಳಿದು ಹೀನ ಕೃತ್ಯವೆಸಗಿದ್ದಾರೆ. ಹಾಗೆಯೆ ಯುವ ಪೀಳಿಗೆಗೆ ಮಾದರಿಯಾಗಿರುವ ನಮ್ಮ ಸಂಗೊಳ್ಳಿ ರಾಯಣ್ಣನವರ ಪ್ರತಿಮೆಗೆ ಹಾನಿ ಮಾಡುವ ಮೂಲಕ ಒಬ್ಬ ಸ್ವಾತಂತ್ರ್ಯ ಹೋರಾಟಗಾರನಿಗೆ ಅವಮಾನ ಮಾಡಿದ್ದಾರೆ. ಯಾವ ಸಂಘಟನೆಯೇ ಆಗಿರಲಿ, ಯಾವ ಪಕ್ಷವೇ ಆಗಿರಲಿ ನಾಡು ನುಡಿಗಿಂತ ದೊಡ್ಡವರೇನಲ್ಲ. ಸಮಾಜದಲ್ಲಿ ಶಾಂತಿ ಕದಡುವಂತೆ ಮಾಡುವ ಇಂತವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿಗಳಿಗೆ ಪತ್ರ ಸಲ್ಲಿಸಿ ಮನವಿ ಮಾಡಿಕೊಂಡರು.

 

ಕರ್ನಾಟಕ ರಕ್ಷಣ ವೇದಿಕೆ ಸ್ವಾಭಿಮಾನಿ ಬಣದಿಂದ  ಪ್ರತಿಭಟನೆ

ಬೆಳಗಾವಿಯಲ್ಲಿ ನಾಡ ಧ್ವಜವನ್ನ ಸುಟ್ಟಿರುವುದು ಹಾಗೂ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಅವಮಾನ ಮಾಡಿರುವುದನ್ನ ಖಂಡಿಸಿ ಕರ್ನಾಟಕ ರಕ್ಷಣ ವೇದಿಕೆ ಸ್ವಾಭಿಮಾನಿ ಬಣದಿಂದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಲಾಯಿತು. ಎಂಇಎಸ್‌ನವರು ಕನ್ನಡ ಧ್ವಜಕ್ಕೆ ಅವಮಾನ ಮಾಡಿದ್ದಾರೆ. ಇದು ಅತ್ಯಂತ ಹೇಯ ಹಾಗೂ ವಿಕೃತ ಕೃತ್ಯ. ಅಖಂಡ ಕರ್ನಾಟಕದ ಅಸ್ಮಿತೆ ಸಾರುವ ನಮ್ಮ ಧ್ವಜದ ವಿಚಾರದಲ್ಲಿ ಆಗಿರುವ ಇಂತಹ ಅಪಚಾರ ಕ್ಷಮಾರ್ಹವಲ್ಲ. ಸಂಗೊಳ್ಳಿ ರಾಯಣ್ಣರ ಪ್ರತಿಮೆಗೆ ಹಾನಿ ಮಾಡಿ ನಮ್ಮ ನಾಡಿನ ಸ್ವಾತಂತ್ರ್ಯ ಹೋರಾಟಗಾರರಿಗೆ ಅವಮಾನ ಮಾಡಿದ್ದು ಖಂಡನೀಯ. ಇಂತಹ ಹೀನ ಕೃತ್ಯಗಳನ್ನ ಮಾಡುವವರಿಗೆ ಸರ್ಕಾರದ ವತಿಯಿಂದ ಗಲ್ಲು ಶಿಕ್ಷೆಯ ಕ್ರಮ ಕೈಗೊಳ್ಳಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿ ಜಿಲ್ಲಾಧಿಕಾರಿ ಮುಖಾಂತರ ಮುಖ್ಯಮಂತ್ರಿಗೆ ಮನವಿ ಪತ್ರ ಸಲ್ಲಿಸಿದ್ದಾರೆ.