ಶಿವಮೊಗ್ಗ : ಮಂಗಳವಾರದಿಂದ ಆರಂಭವಾಗಲಿರುವ ಕೋಟೆ ಶ್ರೀ ಮಾರಿಕಾಂಬ ಜಾತ್ರೆಗೆ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಕರೋನ ಕಾರಣದಿಂದ ಮುಂದೂಡಲ್ಪಟ್ಟಿದ್ದ ಜಾತ್ರೆ ಅದ್ದೂರಿಯಾಗಿಯೇ ನಡೆಯಲಿದ್ದು ಕೋಟೆ ಮಾರಿಕಾಂಬ ಸೇವಾ ಸಮಿತಿಯು ಎಲ್ಲಾ ರೀತಿಯ ತಯಾರಿ ನಡೆಸಿಕೊಂಡಿದೆ.
ಮಾರ್ಚ್ 22ರಿಂದ 26ರವರೆಗೆ ಜಾತ್ರೆ ನಡೆಯಲಿದ್ದು ಮಂಗಳವಾರ ಬೆಳಗ್ಗೆ 7 ಗಂಟೆಗೆ ಗಾಂಧಿ ಬಜಾರ್‌ನಲ್ಲಿ ದೇವಿಗೆ ಪೂಜೆ ಸಲ್ಲಿಸುವ ಮೂಲಕ ಜಾತ್ರೆ ಆರಂಭವಾಗಲಿದೆ. ಐದು ದಿನಗಳ ಕಾಲ ವಿವಿಧ ಪೂಜೆಗಳು ನಡೆಯಲಿವೆ. ಮಾರ್ಚ್ 24,25ರಂದು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಬಳಿಕ ಕೊನೆ ದಿನವಾದ ಮಾರ್ಚ್ 26ರಂದು ರಾತ್ರಿ 8 ಗಂಟೆಗೆ ರಾಜಬೀದಿ ಉತ್ಸವ ನಡೆಯಲಿದೆ. ಗಾಂಧಿ ಬಜಾರ್, ಬಿ.ಹೆಚ್.ರಸ್ತೆ ಮೂಲಕ ಹೊನ್ನಾಳಿ ರಸ್ತೆಯ ಮೇಲ್ಸೇತುವೆ ದಾಟಿ ಅಲ್ಲಿರುವ ಅರಣ್ಯದಲ್ಲಿ ಅಮ್ಮನವರ ಮೂರ್ತಿಯನ್ನು ವಿಸರ್ಜಿಸುವ ಮೂಲಕ ಜಾತ್ರೆಯನ್ನ ಸಂಪನ್ನಗೊಳಿಸಲಾಗುವುದು. ಜಾತ್ರೆ ನಡೆಯುವ ಐದು ದಿನಗಳೂ ಅನ್ನದಾಸೋಹ ಹಮ್ಮಿಕೊಳ್ಳಲಾಗಿದೆ. ಹಾಗೂ ಈ ಸಲ ದೇವಾಲಯದ ಸುತ್ತಮುತ್ತ ಮಳಿಗೆಗಳನ್ನು ಹಾಕಲು ಅವಕಾಶ ನೀಡಿಲ್ಲ.