ವಿವಿಧ ಸಮುದಾಯಗಳು ಸೇರಿ ನಡೆಸುವ ಜಾತ್ರೆಯೇ ನಮ್ಮ ಕೋಟೆ ಶ್ರೀ ಮಾರಿಕಾಂಬ ಜಾತ್ರೆ

ಶಿವಮೊಗ್ಗ :  ಮಾರಿಕಾಂಬ ಜಾತ್ರೆಗೆ ಮಂಗಳವಾರದಿಂದ ಅದ್ದೂರಿ ಆರಂಭ ನೀಡಲಾಗಿದೆ. ಅಮ್ಮನನ್ನು ತವರು ಮನೆಯಿಂದ ಗಂಡನ ಮನೆಗೆ ಮೆರವಣಿಗೆ ಮೂಲಕ ಕರೆತರಲಾಗಿದೆ. ಗದ್ದುಗೆಯ ಮೇಲೆ ಅಮ್ಮನ್ನನ್ನು ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸುವುದು ಎರಡನೇ ದಿನದ ಸಂಪ್ರದಾಯ. ಹಾಗಿದ್ರೆ. ಜಾತ್ರೆಯ ಎರಡನೇ ದಿನ ಏನೆಲ್ಲ ವಿಧಿ ವಿಧಾನಗಳನ್ನು ಆಚರಿಸಲಾಗುತ್ತದೆ. ಈ ಆಚರಣೆಗಳಲ್ಲಿ ವಿವಿಧ ಸಮುದಾಯಗಳ ಪಾತ್ರವೇನು ಅನ್ನೋದರ ಕುರಿತು ಇಲ್ಲಿದೆ ಒಂದು ಕಂಪ್ಲೀಟ್ ರಿಪೋರ್ಟ್.

ಹಬ್ಬ ಅಥವಾ ಜಾತ್ರೆ ಅಂದ್ರೇನೆ ಹಾಗೇ, ನಾನಾ ಆಚರಣೆಗಳು, ನಾನಾ ವಿಧಿ ವಿಧಾನಗಳು, ಅವುಗಳಿಗೆ ಒಂದಿಷ್ಟು ನಿಯಮಾವಳಿಗಳು ಇರ್‍ತಾವೆ. ಶಿವಮೊಗ್ಗ ಕೋಟೆ ಶ್ರೀ ಮಾರಿಕಾಂಬ ದೇವಿಯ ಜಾತ್ರೆ ಐದು ದಿನಗಳ ಕಾಲ ನಡೆಯೋದು ನಿಮಗೆಲ್ಲಾ ಗೊತ್ತೇಯಿದೆ. ಪ್ರತಿದಿನವು ಒಂದೊಂದು ವಿಶೇಷ ಪೂಜೆ, ಧಾರ್ಮಿಕ ಆಚರಣೆಗಳನ್ನು ಮಾಡಲಾಗುತ್ತದೆ. ಪ್ರತಿದಿನವೂ ಸಹಸ್ರಾರು ಭಕ್ತರು ಅಮ್ಮನ ದರ್ಶನಕ್ಕೆ ಬರ್‍ತಾರೆ. ಜಾತ್ರೆಯ ಮೊದಲ ದಿನ ಅಮ್ಮನನ್ನು ತವರು ಮನೆಯಲ್ಲಿ ಪೂಜಿಸಿ ಎರಡನೇ ದಿನ ತವರು ಮನೆಯಿಂದ ಗಂಡನ ಮನೆಗೆ ಮೆರವಣಿಗೆ ಮೂಲಕ ಕರೆತಂದು ಪೂಜಿಸಲಾಗುತ್ತದೆ. ಈ ವೇಳೆ ನಾನಾ ಸಮುದಾಯದಿಂದ ನಾನಾ ಧಾರ್ಮಿಕ ಆಚರಣೆಗಳನ್ನು ಆಚರಿಸಲಾಗುತ್ತದೆ. 

ಹಿಂದಿನ ಕಾಲದಲ್ಲಿ ಮಾರಿಕಾಂಬೆಯನ್ನು ತವರು ಮನೆಯಿಂದ ಗಂಡನ ಮನೆಗೆ ಭಕ್ತರೇ ಪಲ್ಲಕ್ಕಿಯನ್ನು ಹೊತ್ತು ಮೆರವಣಿಗೆ ಮೂಲಕ ಕರೆದುಕೊಂಡು ಬರ್‍ತಾಯಿದ್ರು. ಗಾಂಧೀ ಬಜಾರ್‌ನ ಉಪ್ಪಾರ್ ಕೇರಿಯ ಉಪ್ಪಾರ ಸಮುದಾಯದ ಭಕ್ತರು ಪಲ್ಲಕ್ಕಿ ಹೋತ್ತು ಅಮ್ಮನನ್ನು ಗದ್ದುಗೆಯ ಮೇಲೆ ಕೂರಿಸುತ್ತಿದ್ದರು. ಇದಕ್ಕು ಮೊದಲು ವಿದ್ಯಾನಗರದ ಕರ್ಲಟ್ಟಿಯಲ್ಲಿನ ಹರಿಜನರು ಬೇವಿನ ಉಡುಗೆ ಹಾಗೂ ಕಳಸವನ್ನು ಹೊತ್ತು ತಂದು, ಅಮ್ಮನನ್ನು ಪೂಜಿಸ್ತಾರೆ. ಬಳಕವೇ ದೇವಿಯನ್ನು ಗದ್ದುಗೆಯ ಮೇಲೆ ಕುರಿಸಲಾಗುತ್ತದೆ.

ಈ ಎಲ್ಲಾ ಧಾರ್ಮಿಕ ಕಾರ್ಯಗಳು ಮುಗಿದ ಮೇಲೆಯೇ ಅಮ್ಮನನ್ನು ಗದ್ದುಗೆಯ ಒಳಗೆ ಪ್ರವೇಶ ಮಾಡಿಸಲಾಗುತ್ತದೆ. ಕುರುಬ ಸಮುದಾಯದವರು ಗದ್ದುಗೆಗೆ ಕರಿ ಕಂಬಳಿಯನ್ನು ಹಾಸಿ ಅಮ್ಮನನ್ನು ಪ್ರತಿಷ್ಟಾಪಿಸಿ ಗದ್ದುಗೆಗೆ ಪೂಜೆ ಸಲ್ಲಿಸುತ್ತಾರೆ. ಇದಾದ ಬಳಿಕ ಅಮ್ಮನಿಗೆ ಮೊದಲ ಪೂಜೆಯನ್ನು ವಾಲ್ಮೀಕಿ ಸಮುದಾಯದ ಜನರು ಅರ್ಪಿಸುತ್ತಾರೆ. ನಂತರ ಉಪ್ಪಾರ ಸಮುದಾಯದವರು ಪೂಜಾ ಕಾರ್ಯವನ್ನು ನೆರವೇರಸಿಕೊಡುತ್ತಾರೆ. ಇವರಾದ ನಂತರ ಮಡಿವಾಳ ಸಮುದಾಯದ ಭಕ್ತರು ಅಮ್ಮನ ಆರಾಧನೆಯಲ್ಲಿ ತೊಡಗಿಕೊಳ್ಳುತ್ತಾರೆ. ಹೀಗೆ ಒಂದು ದಿನದಲ್ಲಿ ಮೂರು ಸಮುದಾಯದವರು ಪೂಜಾ ಕಾರ್ಯವನ್ನು ನೆರವೇರಿಸಿಕೊಡುತ್ತಾರೆ. ಜಾತ್ರೆಯ ಕೊನೆ ದಿನದವರೆಗೂ ಇದೇ ರೀತಿ ಪೂಜೆ ಸಲ್ಲಿಸಲಾಗುತ್ತದೆ.

ಮಾರಿ ಜಾತ್ರೆಯನ್ನು ಎಲ್ಲಾ ಸಮುದಾಯದ ಜನರು ಆಚರಿಸುತ್ತಾರೆ. ಜಾತ್ರೆಯಲ್ಲಿ ಎಲ್ಲಾ ಸಮುದಾಯದ ಜನರ ಪಾತ್ರವಿದೆ. ಹೀಗಾಗಿ ಶಿವಮೊಗ್ಗದ ಕೋಟೆ ಶ್ರೀ ಮಾರಿಕಾಂಬ ಜಾತ್ರೆಯನ್ನು ಇಷ್ಟೊಂದು ಅದ್ದೂರಿಯಾಗಿ ಆಚರಿಸುವುದು. ಎಲ್ಲಾ ಸಮುದಾಯದ ಭಾಗವಹಿಸುವಿಕೆಯಿಂದಲೇ ಜಾತ್ರೆಗೆ ವಿಶೇಷ ರಂಗು ಬರುವುದು. ಇದು ನಿನ್ನೆ ಮೊನ್ನೆಯಿಂದ ಆಚರಿಸುತ್ತಾ ಬಂದಿರುವ ಸಂಪ್ರದಾಯವಲ್ಲ. ನೂರಾರು ವರ್ಷಗಳಿಂದಲೂ ಈ ರೀತಿಯ ಧಾರ್ಮಿಕ ಆಚರಣೆಯನ್ನು ಆಚರಿಸಲಾಗುತ್ತದೆ.

ಬ್ಯೂರೋ ರಿಪೋರ್ಟ್ ಕನ್ನಡ ಮೀಡಿಯಂ ೨೪*೭ ಸಂಭವಿಸು ಸಮಸ್ತರ ನಡುವೆ