ಪಠ್ಯಪುಸ್ತಕ ಪರಿಷ್ಕರಣೆಗೆ ವಿರೋಧ

ತೀರ್ಥಹಳ್ಳಿ : ಪಠ್ಯಪುಸ್ತಕ ಪರಿಷ್ಕರಣೆ ವಿರೋಧಿಸಿ ಕಾಂಗ್ರೆಸ್ ತೀರ್ಥಹಳ್ಳಿ ತಾಲೂಕಿನ ಕವಿಶೈಲದಿಂದ ಪಾದಯಾತ್ರೆ ಪ್ರಾರಂಭಿಸಿದೆ. ಮಾಜಿ ಸಚಿವ ಕಿಮ್ಮನೆ ರತ್ನಾಕರ್ ನೇತೃತ್ವದ ಪಾದಯಾತ್ರೆಗೆ ಹಂಸಲೇಖ ಸಹ ಸಾಥ್ ಕೊಟ್ಟಿದ್ದಾರೆ. ಪಾದಯಾತ್ರೆ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕನ್ನಡಕ್ಕೆ ಮಹಾಮನೆ ಕಲ್ಯಾಣ, ಗುರುಮನೆ ಕವಿಶೈಲ. ಕನ್ನಡಕ್ಕೆ ಕುತ್ತು ಬಂದ ಮೇಲೆ ನಾವಿದ್ದು ಏನು ಮಾಡೋದು. ತಮಿಳಿಗರ ರೀತಿ ಕನ್ನಡಿಗರು ಭಾಷಾಭಿಮಾನ ಬೆಳೆಸಿಕೊಳ್ಳಬೇಕಿದೆ. ನಾವು ಭಾಷಾಂಧರು ಅಂದ್ರೂ ಸರಿ, ಅವರನ್ನು ನಾವು ಅನುಸರಿಸಬೇಕು. ಕುಪ್ಪಳಿಯಿಂದ ಕನ್ನಡದ ಕಹಳೆ ಆರಂಭವಾಗಿದೆ. ಅಂದು ಗೋಕಾಕ್ ಚಳುವಳಿ ನಡೆದಿತ್ತು. ಇಂದು ಕುಪ್ಪಳಿ ಕಹಳೆ ಆರಂಭವಾಗಿದೆ ಎಂದರು. ಇದು ನಾಡಿನಾದ್ಯಂತ ಮೊಳಗಬೇಕು. ಕುವೆಂಪು ಅಂದ್ರೆ ಕನ್ನಡ, ಬಸವ ಅಂದ್ರೆ ಕರ್ನಾಟಕ. ಇವರಿಬ್ಬರಿಗೂ ಕುತ್ತು ಬಂದ ಮೇಲೆ ನಾವಿದ್ದು ಏನು ಮಾಡೋದು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಿ.ಸಿ.ನಾಗೇಶ್ ಮಂತ್ರಿ ಆಗಲು ನಾಲಾಯಕ್

ತೀರ್ಥಹಳ್ಳಿಯ ಪಾದಯಾತ್ರೆಯಲ್ಲಿ ಭಾಗಿಯಾಗಿ ಮಾತನಾಡಿದ ರಾಜ್ಯ ಹಾಗೂ ಕೇಂದ್ರ ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡರು. ಬಿ.ಸಿ.ನಾಗೇಶ್ ಮಂತ್ರಿ ಆಗಲು ನಾಲಾಯಕ್. ಮೊದಲು ಎಲ್ಲವೂ ಸರಿ ಇದೆ ಅಂತಾರೆ ಅಮೇಲೆ ತಪ್ಪು ಸರಿಪಡಿಸಿಕೊಳ್ಳುತ್ತೇವೆ ಅಂತಾರೆ. ರೋಹಿತ್ ಚಕ್ರತೀರ್ಥ ಅಂಬೇಡ್ಕರ್ ಸಂವಿಧಾನ ಶಿಲ್ಪಿ ಎನ್ನುವುದನ್ನು ತೆಗೆದಿದ್ದಾರೆ. ಹಾಗಾದ್ರೆ ಸಂವಿಧಾನ ರಚನೆ ಮಾಡಿದ್ದು ಯಾರು? ಮೋದಿ ಅವರಾ, ಅಮಿತ್ ಷಾ ಅವರಾ. ಬಿಜೆಪಿಗೆ ಇತಿಹಾಸ ಗೊತ್ತಿಲ್ಲ, ಇತಿಹಾಸ ತಿರುಚೋದು ಗೊತ್ತು ಎಂದು ಕಿಡಿಕಾರಿದರು. ಇನ್ನು ನ್ಯಾಷನಲ್ ಹೆರಾಲ್ಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಅವರು, ಕೇಂದ್ರ ಸರ್ಕಾರ ತನಿಖಾ ಸಂಸ್ಥೆಗಳನ್ನು ತನ್ನ ಕೈಗೊಂಬೆಯಾಗಿ ಬಳಸಿಕೊಳ್ತಾಯಿದೆ. ಸೋನಿಯಾಗಾಂಧಿ ರಾಹುಲ್ ಗಾಂಧಿಗೆ ರಾಜಕೀಯವಾಗಿ ಕಿರುಕುಳ ನೀಡಲು ಈ ತನಿಖೆ ನಡೆಯುತ್ತಿದೆ. ಭಾರತ್ ಜೋಡೋ ಯಾತ್ರೆಯನ್ನ ತಡೆಯಲು ಈ ರೀತಿ ಮಾಡಿದ್ದಾರೆ ಎಂದು ಆರೋಪಿಸಿದರು.

ಆರಗ ಜ್ಞಾನೇಂದ್ರ ವಿರುದ್ಧ ಹರಿಹಾಯ್ದ ಬಿ.ಕೆ.ಹರಿಪ್ರಸಾದ್

ವಿಧಾನ ಪರಿಷತ್ ವಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್ ಗೃಹಮಂತ್ರಿ ಆರಗ ಜ್ಞಾನೇಂದ್ರ ವಿರುದ್ದ ಹರಿಹಾಯ್ದಿದಿದ್ದಾರೆ. ಇಡೀ ರಾಜ್ಯಕ್ಕೆ ಗೃಹ ಸಚಿವರಾಗಿರಬೇಕಾದವರು, ಗುಡ್ಡೇಕೊಪ್ಪ ಪಂಚಾಯ್ತಿಗೆ ಮಾತ್ರ ಸೀಮಿತರಾಗಿದ್ದಾರೆ ಎಂದು ಕಾಲೆಳಿದಿದ್ದಾರೆ. ಪಠ್ಯಪುಸ್ತಕ ಪರಿಷ್ಕರಣೆ ವಿಚಾರದಲ್ಲಿ ಕುಪ್ಪಳಿಯಿಂದ ತೀರ್ಥಹಳ್ಳಿಯವರೆಗೆ ನಡೆಯುತ್ತಿರುವ ಪಾದಯಾತ್ರೆಯಲ್ಲಿ ಭಾಗಿಯಾಗಿ ಮಾತನಾಡಿದ ಬಿ.ಕೆ.ಹರಿಪ್ರಸಾದ್, ರಾಜ್ಯದ ಇತಿಹಾಸದಲ್ಲಿಯೇ ಇಂಥಹ ಕಳಪೆ ಗೃಹ ಸಚಿವರನ್ನು ನೋಡಿರಲಿಲ್ಲ. ಎಲ್ಲಾ ವಿಚಾರದಲ್ಲಿ ಗೊಂದಲ ಸೃಷ್ಟಿ ಮಾಡಿ, ರಾಜ್ಯವನ್ನು ಬಿಹಾರ, ಉತ್ತರಪ್ರದೇಶ ಸ್ಥಿತಿಗೆ ತಂದಿಟ್ಟಿದ್ದಾರೆ. ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಕುಲಗೆಟ್ಟಿದೆ. ಪಿಎಸ್‌ಐ ಹಗರಣ ಇವರ ನೇತೃತ್ವದಲ್ಲೇ ನಡೆದಿದೆ. ಈ ಪ್ರಕರಣದಲ್ಲಿ ಗೃಹಸಚಿವರ ವಿರುದ್ದವೂ ಪ್ರಕರಣ ದಾಖಲಾಗಬೇಕಿತ್ತು ಎಂದು ಆಗ್ರಹಿಸಿದ್ದಾರೆ. ಇನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಕ್ಷಣವೇ ಅವರ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.