ಶಿವಮೊಗ್ಗ ದಸರಾಗೆ ಅಧಿಕೃತ ಚಾಲನೆ... ಚಾಮುಂಡೇಶ್ವರಿ ತಾಯಿಯ ಅದ್ಧೂರಿ ಮೆರವಣಿಗೆ 

ಶಿವಮೊಗ್ಗ: ನಗರದ ಕೋಟೆ ಶ್ರೀ ಚಂಡಿಕಾ ಪರಮೇಶ್ವರಿ ದೇವಸ್ಥಾನದಲ್ಲಿ ನಾಡದೇವತೆ ಉತ್ಸವ ಮೂರ್ತಿಗೆ ಪೂಜೆ ಸಲ್ಲಿಸುವ ಮೂಲಕ ಶಿವಮೊಗ್ಗ ದಸರಾಗೆ ಅಧಿಕೃತ ಚಾಲನೆ ಸಿಕ್ಕಿದೆ. ಯಕ್ಷಗಾನ ಕಲಾವಿದರಾದ ಶಿವಕುಮಾರ್ ಬೇಗಾರ್ ಅವರು ದಸರಾ ಉದ್ಘಾಟನೆ ಮಾಡಿದ್ರು.

ಈ ಸಂದರ್ಭದಲ್ಲಿ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ, ಪಾಲಿಕೆ ಆಡಳಿತ ಪಕ್ಷದ ನಾಯಕ ಚನ್ನಬಸಪ್ಪ, ಮೇಯರ್ ಸುನೀತಾ ಅಣ್ಣಪ್ಪ, ಪಾಲಿಕೆ ಸದಸ್ಯ ಹೆಚ್.ಸಿ.ಯೋಗೀಶ್ ಮತ್ತಿತರರು ಭಾಗವಹಿಸಿದ್ರು.

ಯಕ್ಷಗಾನ ಕಲಾವಿದರಾದ ಶಿವಕುಮಾರ್ ಬೇಗಾರ್ ಉದ್ಘಾಟನಾ ಭಾಷಣ ಮಾಡಿದ್ರು. ಈ ವೇಳೆ ದಸರಾದಲ್ಲಿ ಯಕ್ಷಗಾನ ಪ್ರದರ್ಶನಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಸಚಿವರಲ್ಲಿ ಮನವಿ ಮಾಡಿಕೊಂಡ್ರು. ಬಳಿಕ ಮಾತನಾಡಿದ ಸಚಿವ ಕೆ.ಎಸ್.ಈಶ್ವರಪ್ಪ, ಮುಂದಿನ ಬಾರಿಯ ದಸರಾದಲ್ಲಿ ಯಕ್ಷಗಾನ ಪ್ರದರ್ಶನಕ್ಕೆ ಬೇಕಾಗುವ ಎಲ್ಲಾ ವ್ಯವಸ್ಥೆ ಮಾಡೋದಾಗಿ ಭರವಸೆ ನೀಡಿದ್ರು.

ಇದಕ್ಕೂ ಮುನ್ನ ಮಹಾನಗರ ಪಾಲಿಕೆ ಆವರಣದಿಂದ ಕೋಟೆ ಶ್ರೀಚಂಡಿಕಾ ಪರಮೇಶ್ವರಿ ದೇವಸ್ಥಾನದವರೆಗೆ ನಾಡದೇವಿಯ ಭವ್ಯ ಮೆರವಣಿಗೆ ನಡೆಯಿತು. ಮೇಯರ್ ಸುನೀತಾ ಅಣ್ಣಪ್ಪ, ಉಪ ಮೇಯರ್ ಶಂಕರ್ ಗನ್ನಿ, ಆಡಳಿತ ಮತ್ತು ವಿರೋಧ ಪಕ್ಷದ ಕಾರ್ಪೋರೇಟರ್‌ಗಳು ನಾಡದೇವತೆ ಮೂರ್ತಿಗೆ ಪೂಜೆ ಸಲ್ಲಿಸಿದ್ರು. ಮಹಾನಗರ ಪಾಳಿಕೆಯಲ್ಲಿ ನಾಡದೇವಿ ಚಾಮುಂಡೇಶ್ವರಿಯ ಬೆಳ್ಳಿ ಲೇಪಿತ ಮೂರ್ತಿ ಮತ್ತು ಅಂಬಾರಿಯನ್ನು ಇರಿಸಲಾಗಿತ್ತು. ಅಲ್ಲಿಂದ ದೇವಸ್ಥಾನದವರೆಗೆ ಮೆರವಣಿಗೆ ನಡೆಸಿ ದೇಗುಲದ ಆವರಣದಲ್ಲಿ ದೇವಿಯ ಮೂರ್ತಿಯನ್ನು ಪ್ರತಿಷ್ಠಾಪಿಸಲಾಯಿತು. ಇಂದಿನಿAದ ೯ ದಿನಗಳ ಕಾಲ ದೇವಿಗೆ ವಿಶೇಷ ಪೂಜೆ-ಪುನಸ್ಕಾರಗಳು ನೆರವೇರುತ್ತವೆ.