ಶಿವಮೊಗ್ಗ : ಗುತ್ತಿಗೆದಾರ ಸಂತೋಷ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜೀನಾಮೆ ಕೊಡುವ ಪ್ರಶ್ನೆಯೆ ಉದ್ಭವವಾಗುವುದಿಲ್ಲ. ವಿನಾ ಕಾರಣ ವಿರೋಧ ಪಕ್ಷದವರು ನನ್ನ ಮೇಲೆ ಆರೋಪ ಮಾಡುತ್ತಿದ್ದಾರೆ. ಇದರ ಹಿಂದೆ ಒಂದು ಷಡ್ಯಂತ್ರವೇ ಇದೆ ಎಂದು ಸಚಿವ ಈಶ್ವರಪ್ಪ ಹೇಳಿದರು.
ಈ ಸಂಬಂಧ ಶಿವಮೊಗ್ಗದ ಬಿಜೆಪಿ ಕಚೇರಿಯಲ್ಲಿ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಅವರು, ಸಂತೋಷ್ ಯಾವ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಅನ್ನೋದು ತನಿಖೆಯಿಂದ ಹೊರಬರಬೇಕು. ವಾಟ್ಸಪ್ ಟೆಕ್ಸ್ಟ್‌ಅನ್ನು ಡೆತ್ ನೋಟು ಅನ್ನಲು ಸಾಧ್ಯವಿಲ್ಲ. ಹಾಗಾಗಿ ಮೃತ ಸಂತೋಷ್ ಡೆತ್ ನೋಟ್ ಬಗ್ಗೆ ತನಿಖೆಯಾಗಲಿ. ರಾಜೀನಾಮೆ ಯಾವ ಕಾರಣಕ್ಕೆ ಕೊಡಬೇಕು? ಎಂದು ವಿರೋಧ ಪಕ್ಷದರು ಸಹ ಹೇಳಲಿ. ಪ್ರಕರಣದಲ್ಲಿ ನನ್ನ ಹೆಸರನ್ನು ಎಳೆದುತರುವ ಷಡ್ಯಂತ್ರ ನಡೆಯುತ್ತಿದೆ. ಆದರೆ, ಸದ್ಯಕ್ಕೆ ಯಾರ ಹೆಸರನ್ನು ನಾನು ಪ್ರಸ್ತಾಪ ಮಾಡಲ್ಲ.
ಇಂತಹ ನೂರು ಪ್ರಕರಣ ಬರಲಿ. ನಾನು ಎದುರಿಸುವೆ. ನಾನು ಎಲ್ಲಿಯೂ ಓಡಿ ಹೋಗುವುದಿಲ್ಲ. ಈ ಬಗ್ಗೆ ಸಂಪೂರ್ಣ ತನಿಖೆಯಾಗಲಿ. ತನಿಖೆಗೆ ನಾನು ಸಿದ್ಧ. ಆದರೆ, ನೂರಕ್ಕೆ ನೂರರಷ್ಟು ನಾನು ರಾಜೀನಾಮೆ ಕೊಡುವುದಿಲ್ಲ ಎಂದು ಸಚಿವ ಈಶ್ವರಪ್ಪ ಸ್ಪಷ್ಟಪಡಿಸಿದರು.