ಬೆಂಗಳೂರು : ರಾಜ್ಯದಲ್ಲಿ ಡಿಸೆಂಬರ್ 28ರಿಂದ 10 ದಿನಗಳ ಕಾಲ ನೈಟ್ ಕರ್ಫ್ಯೂ ಜಾರಿ ಮಾಡಲಾಗಿದೆ. ರಾತ್ರಿ 10ರಿಂದ ಬೆಳಿಗ್ಗೆ 5 ಗಂಟೆವರೆಗೆ ಕರ್ಫ್ಯೂ ಇರಲಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ತೀರ್ಮಾನ ಮಾಡಲಾಗಿದೆ.
ಓಮಿಕ್ರಾನ್ ಯಾವ ರೀತಿಯಲ್ಲಿ ಹರಡಿದೆ ಅಂತ ಬೇರೆ ದೇಶಗಳು ಹಾಗೂ ರಾಜ್ಯಗಳಲ್ಲಿ ಅಧ್ಯಯನ ಮಾಡಲಾಗಿದೆ. ನಮ್ಮ ರಾಜ್ಯದಲ್ಲಿ ಯಾವ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸಭೆಯಲ್ಲಿ ಚರ್ಚೆ ನಡೆಸಿ, ಬಳಿಕ ನೈಟ್ ಕರ್ಫ್ಯೂ ಸೇರಿದಂತೆ ಕೆಲ ಕಠಿಣ ನಿಯಮ ಜಾರಿ ಮಾಡಲಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ಹೊಸ ವರ್ಷ ಆಚರಣೆ ನಿಷೇಧ ಮಾಡಲಾಗಿದೆ. ಹಗಲಿನಲ್ಲಿ ಹೋಟೆಲ್, ಬಾರ್, ಪಬ್‌ಗಳಲ್ಲಿ ಶೇಕಡಾ 50ರಷ್ಟು ಜನರಿಗೆ ಮಾತ್ರ ಅವಕಾಶ ನೀಡಲಾಗಿದೆ. ಆದರೆ ಥಿಯೇಟರ್‌ಗಳಿಗೆ ಸದ್ಯಕ್ಕೆ ರಿಲೀಫ್ ನೀಡಲಾಗಿದೆ.