ಶಿವಮೊಗ್ಗ : ಮಹಾದಾಯಿ ವಿಷಯವಾಗಿ ಗೋವಾ ಚುನಾವಣೆಯಲ್ಲಿ, ಗೋವಾ ಜನರ ವೋಟ್ ತೆಗೆದುಕೊಳ್ಳಲು ನಾವು ನಾಟಕ ಮಾಡಿದೆವು, ನಾವು ಯಾವುದೇ ಕಾರಣಕ್ಕೂ ಗೋವಾ ಪರವಾಗಿಲ್ಲ. ಕರ್ನಾಟಕದ ಪರವಾಗಿ ಇದ್ದೇವೆ ಎಂದು ಸೋನಿಯಾ ಗಾಂಧಿಯಿಂದ ಕ್ಷಮೆಯ ಹೇಳಿಕೆ ನೀಡಿಸಿ. ಆನಂತರ ಕಾಂಗ್ರೆಸ್‌ನವರು ಮಹಾದಾಯಿ ವಿಚಾರವಾಗಿ ಪಾದಯಾತ್ರೆ ಮಾಡಲಿ ಎಂದು ಸಚಿವ ಕೆ.ಎಸ್.ಈಶ್ವರಪ್ಪ ಸವಾಲ್ ಹಾಕಿದ್ದಾರೆ.
ಮಹಾದಾಯಿ ಯೋಜನೆ ಕುರಿತಾಗಿ ಪಾದಯಾತ್ರೆ ನಡೆಸುತ್ತೇವೆ ಎಂಬ ಕಾಂಗ್ರೆಸ್ ಸದಸ್ಯರ ಹೇಳಿಕೆಗಳ ಕುರಿತಾಗಿ ಮಾಧ್ಯಮ ಪ್ರತಿನಿಧಿಗಳ ಜೊತೆ ಪ್ರತಿಕ್ರಿಯೆ ನೀಡಿದ ಅವರು, ನಾನು ನೀರಾವರಿ ಮಂತ್ರಿಯಾಗಿದ್ದಾಗ ಮಹಾದಾಯಿ ಯೋಜನೆ ಶುರು ಮಾಡಿದ್ದು. ಆಗ ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ, ಧರಂಸಿಂಗ್ ದೆಹಲಿಗೆ ಹೋದರು. ಅಲ್ಲಿ ಗೋವಾ ಮುಖ್ಯಮಂತ್ರಿಗೆ ಬುದ್ದಿವಾದ ಹೇಳಿ ಎಂದು ಸೋನಿಯಾ ಗಾಂಧಿಯನ್ನ ಭೇಟಿಮಾಡಿದರು. ನಂತರ ಕಾಂಗ್ರೆಸ್ ಪಕ್ಷ ಕರ್ನಾಟಕದ ಪರವಿದೆ ಎಂದು ಪ್ರೆಸ್ ಮೀಟ್ ಮಾಡಿ ಹೇಳಿದರು. ಇದಾಗಿ ನಾಲ್ಕೆ ದಿನದಲ್ಲಿ ಗೋವಾ ಚುನಾವಣಾ ಪ್ರಚಾರದಲ್ಲಿ ಒಂದು ಹನಿ ಮಹಾದಾಯಿ ನೀರನ್ನ ಕರ್ನಾಟಕಕ್ಕೆ ಬಿಡಲು ನಾವು ಬಿಡುವುದಿಲ್ಲ ಎಂದು ಸೋನಿಯಾ ಗಾಂಧಿ ಹೇಳಿದ್ದರು ಎಂದು ಕಾಂಗ್ರೆಸ್ ನಾಯಕರಿಗೆ ಈಶ್ವರಪ್ಪ ಟಾಂಗ್ ನೀಡಿದರು