ಅಮೆರಿಕದ ಅಥೆನ್ಸ್ ವಿವಿಯೊಂದಿಗೆ ಶೈಕ್ಷಣಿಕ ಒಪ್ಪಂದಕ್ಕೆ ಸಹಿ ಹಾಕಿದ ಕುವೆಂಪು ವಿವಿ

ಶಿವಮೊಗ್ಗ : ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಮಂಡಳಿ, ಕುವೆಂಪು ವಿಶ್ವವಿದ್ಯಾಲಯ ಮತ್ತು ಅಮೇರಿಕಾದ ಅಥೆನ್ಸ್ ಸ್ಟೇಟ್ ವಿಶ್ವವಿದ್ಯಾಲಯಗಳ ತ್ರಿಸದಸ್ಯ ಶೈಕ್ಷಣಿಕ - ಸಂಶೋಧನಾ ಒಪ್ಪಂಕ್ಕೆ ಸಹಿ ಹಾಕಲಾಗಿದೆ.

ಆನ್‌ಲೈನ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಉನ್ನತ ಶಿಕ್ಷಣ ಸಚಿವ ಡಾ.ಅಶ್ವಥ್ ನಾರಾಯಣ, ಸಾಂಸ್ಕೃತಿಕ, ಸಾಹಿತ್ಯಿಕ ಶ್ರೀಮಂತಿಕೆಯುಳ್ಳ ಕರ್ನಾಟಕದ ಸ್ಥಳೀಯ ವಿಶ್ವವಿದ್ಯಾಲಯಗಳಲ್ಲವೆ. ಇಲ್ಲಿನ ಕಲಿಕೆ ಮತ್ತು ಸಂಶೋಧನಾ ಚಟುವಟಿಕೆಗಳನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ತಲುಪಿಸುವ ನಿಟ್ಟಿನಲ್ಲಿ ಉನ್ನತ ಶಿಕ್ಷಣ ಇಲಾಖೆ ಕಾರ್ಯೋನ್ಮುಖವಾಗಿದೆ. ಈ ಯೋಜನೆಯ ಭಾಗವಾಗಿ ಅಮೇರಿಕಾದ ಅಥೆನ್ಸ್ ಸ್ಟೇಟ್ ವಿವಿ ಮತ್ತು ಕುವೆಂಪು ವಿವಿಗಳೊಂದಿಗೆ ಶೈಕ್ಷಣಿಕ ಒಪ್ಪಂದ ಏರ್ಪಡಿಸುತ್ತಿದೆ ಎಂದರು.

ಕುವೆಂಪು ವಿವಿ ಕುಲಪತಿ ಪ್ರೊ. ಬಿ. ಪಿ. ವೀರಭದ್ರಪ್ಪ ಮಾತನಾಡಿ, ಅಂತಾರಾಷ್ಟ್ರೀಯ ಮಟ್ಟದ ವಿದ್ಯಾರ್ಥಿ-ಶಿಕ್ಷಕರ ಪರಸ್ಪರ ವಿನಿಮಯ, ಸಂಶೋಧನಾ ಚಟುವಟಿಕೆಗಳಲ್ಲಿನ ಸಹಕಾರ, ಉಭಯ ಸಂಸ್ಥೆಗಳಿಂದ ವಿಶೇಷ ವಿಷಯಗಳ ಮೇಲೆ ಪದವಿಗಳ ಆರಂಭ ಕಾರ್ಯಕ್ರಮಗಳು ಕುವೆಂಪು ವಿವಿ ಮತ್ತು ರಾಜ್ಯಕ್ಕೆ ಬೌದ್ಧಿಕ ನಾಯಕತ್ವ ವಹಿಸುವ ಅವಕಾಶಗಳನ್ನು ಒದಗಿಸಲಿದೆ ಎಂದರು.