ಶಿವಮೊಗ್ಗ : ಪಕ್ಷವು ಸಂಘಟನೆಯ ಜವಬ್ದಾರಿ ನೀಡಿದರೆ ಅದನ್ನ ಸಂತೋಷವಾಗಿ ಒಪ್ಪಿಕೊಳ್ಳುತ್ತೇನೆ. ಮಂತ್ರಿ ಸ್ಥಾನಕ್ಕಿಂತಲೂ ಪಕ್ಷದ ಜವಾಬ್ದಾರಿ ನನಗೆ ತುಂಬಾ ಖುಷಿ ಎಂದು ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ. ರಾಜ್ಯದಲ್ಲಿ ಸಂಪುಟ ವಿಸ್ತರಣೆ ಹಾಗೂ ರಾಜ್ಯಾಧ್ಯಕ್ಷರ ಬದಲಾವಣೆ ಕುರಿತಾಗಿ ಚರ್ಚೆ ಆರಂಭವಾಗಿದೆ.
ಈ ಕುರಿತಾಗಿ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವರು, ಚುನಾವಣೆಗೆ ಇನ್ನು ಒಂದು ವರ್ಷ, ಮೂರು ತಿಂಗಳು ಬಾಕಿಯಿದೆ. ನಾಲ್ಕು ಸ್ಥಾನಗಳು ಕೂಡ ಖಾಲಿಯಿವೆ. ಹೀಗಾಗಿ ರಾಷ್ಟ್ರೀಯ ನಾಯಕರು ಈ ಬಗ್ಗೆ ಚರ್ಚೆ ಮಾಡಿ, ಆ ಸ್ಥಾನಗಳನ್ನು ಯಾರಿಗೆ ಕೊಡಬೇಕೆಂದು ತೀರ್ಮಾನ ತೆಗೆದುಕೊಳ್ಳುತ್ತಾರೆ. ರಾಜಕಾರಣದಲ್ಲಿ ಹುದ್ದೆ ಖಾಲಿ ಎಂದಾಗ ಆಕಾಂಕ್ಷಿಗಳು ಇರುವುದು ಸ್ವಾಭಾವಿಕ ಎಂದು ಹೇಳಿದರು. ಹಾಗೆಯೇ ರಾಜ್ಯಾಧ್ಯಕ್ಷರ ಬದಲಾವಣೆ ಚರ್ಚೆಯ ಕುರಿತಾಗಿ ಪ್ರತಿಕ್ರಿಯಿಸಿದ ಸಚಿವರು, ರಾಜ್ಯಾಧ್ಯಕ್ಷರ ಬದಲಾವಣೆ ಮಾಡುವ ಪ್ರಶ್ನೆಯೇ ಇಲ್ಲ. ನಾಲ್ಕು ಸ್ಥಾನ ಖಾಲಿ ಇರುವುದಕ್ಕಾಗಿ ಮಂತ್ರಿಮಂಡಲದ ಕುರಿತಾಗಿ ಚರ್ಚೆ ಮಾಡುತ್ತಿದ್ದಾರೆ. ಆದ್ರೆ ರಾಜ್ಯಾಧ್ಯಕ್ಷರ ಸ್ಥಾನ ಖಾಲಿ ಇಲ್ಲ. ಹೀಗಾಗಿ ರಾಜ್ಯಾಧ್ಯಕ್ಷ ಬದಲಾವಣೆಯ ಪ್ರಶ್ನೆ ಉದ್ಭವವಾಗಲ್ಲ ಎಂದು ಹೇಳಿದರು.