ಋಣಾತ್ಮಕ ಅಂಕ ಇದಿಯೋ? ಇಲ್ಲವೋ? 

ಬೆಂಗಳೂರು : ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಇತ್ತೀಚೆಗೆ ನಡೆಸಿದ ಸಹಾಯಕ ಪ್ರಧ್ಯಾಪಕ ಹುದ್ದೆಯಲ್ಲಿನ ಪ್ರಶ್ನೆ ಪತ್ರಿಕೆಯಲ್ಲಿನ ಒಂದೊಂದೆ ಯಡವಟ್ಟುಗಳು ಹೊರಬರುತ್ತಿವೆ. ಪ್ರಾಧಿಕಾರವು ಪ್ರಶ್ನೆ ಪತ್ರಿಕೆಯಲ್ಲಿ ಹಲವು ತಪ್ಪುಗಳನ್ನು ಮಾಡುವ ಮೂಲಕ ಪರಿಕ್ಷಾರ್ಥಿಗಲ್ಲಿ ಗೊಂದಲ ಸೃಷ್ಟಿಸಿತ್ತು. ಇದೀಗ ಪ್ರಶ್ನೆ ಪತ್ರಿಕೆಯಲ್ಲಿ ಋಣಾತ್ಮಕ ಅಂಕಗಳ ಕುರಿತು ಯಾವುದೇ ಸೂಚನೆ ನೀಡಿರದ ಪ್ರಾಧಿಕಾರದ ಯಡವಟ್ಟಿನಿಂದಾಗಿ ಸಾಕಷ್ಟು ಪರಿಕ್ಷಾರ್ಥಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಪ್ರಶ್ನೆ ಪತ್ರಿಕೆಯಲ್ಲಿ ಪರಿಕ್ಷಾರ್ಥಿಗಳಿಗಾಗಿ ಹಲವು ಸೂಚನೆಗಳನ್ನು ನೀಡಲಾಗಿದೆ. ಆದರೆ ತಪ್ಪು ಉತ್ತರಕ್ಕೆ ಅಂಕಗಳನ್ನು ಕಳೆಯಲಾಗುತ್ತದೆ ಎಂದು ಎಲ್ಲಿಯೂ ಸೂಚಿಸಿಲ್ಲ. ಹೀಗಾಗಿ ಹಲವರು ಋಣಾತ್ಮಕ ಅಂಕ ಇಲ್ಲವೆಂದು ಭಾವಿಸಿ ಎಲ್ಲಾ 125 ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. ಇಷ್ಟೇ ಅಲ್ಲದೆ, ಕನ್ನಡ ಐಚ್ಚಿಕ ಪ್ರಶ್ನೆ ಪತ್ರಿಕೆಯಲ್ಲಿ ಕನ್ನಡದಲ್ಲಿ ಮುದ್ರಿತವಾಗಿರುವ ಪ್ರಶ್ನೆಗಳ ಬಗ್ಗೆ ಏನಾದರೂ ಸಂದೇಹವಿದ್ದಲ್ಲಿ ಇಂಗ್ಲೀಷ್ ಆವೃತ್ತಿಯ ಪ್ರಶ್ನೆ ಪತ್ರಿಕೆಯನ್ನು ನೋಡಬಹುದು. ಏನಾದರೂ ವ್ಯತ್ಯಾಸ ಕಂಡುಬಂದಲ್ಲಿ ಇಂಗ್ಲೀಷ್ ಆವೃತ್ತಿಯನ್ನು ಅಂತಿಮ ಎಂದು ಪರಿಗಣಿಸಲಾಗುವುದು ಎಂದು ಸೂಚನೆ ಕೊಟ್ಟಿದ್ದಾರೆ. ಆದರೆ ಇವರ ಸೂಚನೆಯಂತೆ ಪ್ರಶ್ನೆ ಪತ್ರಿಕೆಗಳಲ್ಲಿ ಇಂಗ್ಲೀಷ್ ಆವೃತ್ತಿ ಮುದ್ರಣವಾಗಿರಲಿಲ್ಲ. ಅಷ್ಟಕ್ಕು ಐಚ್ಚಿಕ ಕನ್ನಡಕ್ಕೆ ಇಂಗ್ಲೀಷ್ ಆವೃತ್ತಿಯ ಅವಶ್ಯಕತೆ ಇದೆಯಾ ಎಂಬುದು ಪರಿಕ್ಷಾರ್ಥಿಗಳ ಪ್ರಶ್ನೆ. ಗೊಂದಲದ ಗೂಡಾಗಿದ್ದ ಪ್ರಶ್ನೆ ಪತ್ರಿಕೆಯಿಂದ ಸಾಕಷ್ಟು ಪರಿಕ್ಷಾರ್ಥಿಗಳು ಸಂಕಷ್ಟದಲ್ಲಿದ್ದಾರೆ.