ಶಾಸಕ ಹಾಲಪ್ಪ - ಶ್ರೀಪಾದ್ ಬೆಂಬಲಿಗರ ನಡುವೆ ಮಾರಾಮಾರಿ  

ಸಾಗರ : ಮಲೆನಾಡು ಅಭಿವೃದ್ಧಿ ಪ್ರತಿಷ್ಠಾನ ಸಂಸ್ಥೆಯಲ್ಲಿ ಆಂತರಿಕ ಕಲಹ ತಾರಕಕ್ಕೇರಿದೆ. ಸರ್ವ ಸದಸ್ಯರ ಸಭೆಯಲ್ಲಿ ಶಾಸಕ ಹರತಾಳು ಹಾಲಪ್ಪ ಮತ್ತು ಶಿಮುಲ್ ಅಧ್ಯಕ್ಷ ಶ್ರೀಪಾದ್ ಹೆಗಡೆ ಬೆಂಬಲಿಗರ ನಡುವೆ ಮಾರಾಮಾರಿ ನಡೆದಿದೆ. ಸಂಸ್ಥೆಯ ಅಧ್ಯಕ್ಷ ಸ್ಥಾನಕ್ಕೆ ನಡೆದ ಪೈಪೋಟಿ ಕಲಹಕ್ಕೆ ಕಾರಣವಾಗಿದೆ. ಶಿವಮೊಗ್ಗ ಹಾಲು ಒಕ್ಕೂಟದ ಅಧ್ಯಕ್ಷ ಹಾಗೂ ಎಂಡಿಎಫ್ ಸಂಸ್ಥೆಯ ಉಪಾಧ್ಯಕ್ಷರಾಗಿದ್ದ ಶ್ರೀಪಾದ ಹೆಗಡೆ ನಿಸರಾಣಿ ಸೇರಿ ಇಬ್ಬರ ಮೇಲೆ ಹಲ್ಲೆ ನಡೆಸಲಾಗಿದೆ.

ಸಾಗರದ ದೇವರಾಜ ಅರಸು ಕಲಾಭವನದಲ್ಲಿ ಮಲೆನಾಡು ಅಭಿವೃದ್ಧಿ ಪ್ರತಿಷ್ಠಾನ ಸಂಸ್ಥೆಯ ೫೬ನೇ ಸರ್ವ ಸದಸ್ಯರ ಸಭೆ ಆಯೋಜಿಸಲಾಗಿತ್ತು. ಈ ವೇಳೆ ಸಂಸ್ಥೆಯ ಹಿಂದಿನ ಅಧ್ಯಕ್ಷ ಕೆ.ಹೆಚ್.ಶ್ರೀನಿವಾಸ್ ಅವರು ಹರನಾಥರಾವ್ ಮತ್ತಿಕೊಪ್ಪ ಅವರನ್ನು ನೂತನ ಅಧ್ಯಕ್ಷ ಎಂದು ಘೋಷಿಸಲಾಗಿತ್ತು. ಇದು ಕೆಲವರ ಅಸಮಾಧಾನಕ್ಕೆ ಕಾರಣವಾಯಿತು.

ಇನ್ನೊಂದು ಪ್ರತ್ಯೇಕ ಸಭೆಯಲ್ಲಿ ದಳವಾಯಿ ದಾನಪ್ಪ ಅವರ ಅಧ್ಯಕ್ಷತೆಯಲ್ಲಿ ಎಂಡಿಎಫ್ ಪ್ರತ್ಯೇಕ ವಾರ್ಷಿಕ ಸಭೆ ನಡೆಸಲಾಯಿತು. ಈ ವೇಳೆ ಅಲ್ಲಿ ಉಪಾಧ್ಯಕ್ಷರಾಗಿದ್ದ ಶ್ರೀಪಾದ ಹೆಗಡೆ ನಿಸರಾಣಿ ಅವರನ್ನು ನೂತನ ಅಧ್ಯಕ್ಷ ಎಂದು ಘೋಷಿಸಲಾಗಿತ್ತು.

ಈ ನಡುವೆ ಗುರುವಾರ ನಡೆದ ನೂತನ ಅಧ್ಯಕ್ಷರ ಅಧಿಕಾರ ಹಸ್ತಾಂತರ ಸಂದರ್ಭ ಶಾಸಕ ಹರತಾಳು ಹಾಲಪ್ಪ ಸಭೆಗೆ ಆಗಮಿಸಿದರು. ನೂತನ ಅಧ್ಯಕ್ಷ ಹರನಾಥರಾವ್ ಮತ್ತಿಕೊಪ್ಪ ಅವರಿಗೆ ಅಭಿನಂದನೆ ಸಲ್ಲಿಸಿದರು. ಈ ವೇಳೆ ಶ್ರೀಪಾದ ಹೆಗಡೆ ನಿಸರಾಣಿ ಅವರನ್ನು ಅಧ್ಯಕ್ಷ ಎಂದು ಮತ್ತೊಂದು ಗುಂಪು ಅಭಿನಂದನೆ ಸಲ್ಲಿಸಿತು. ಇದರಿಂದ ಗೊಂದಲ ಸೃಷ್ಟಿಯಾಯಿತು.

ಪ್ರತಿಭಟನೆ ನಡೆದು ಘೋಷಣೆ ಕೂಗಲಾಯಿತು. ಎರಡು ಗುಂಪಿನ ಮಧ್ಯೆ ಮಾತಿನ ಚಕಮಕಿ ನಡೆಯಿತು. ಎರಡು ಗುಂಪುಗಳ ಮಧ್ಯೆ ರೆಸಲ್ಯೂಷನ್ ಪುಸ್ತಕಕ್ಕಾಗಿ ಕಿತ್ತಾಟ ಆರಂಭವಾಯಿತು. ನೂಕಾಟ ತಾಳಾಟದ ನಡುವೆ ಎರಡು ಗುಂಪುಗಳು ಕೈಕೈ ಮಿಲಾಯಿಸಿದವು. ಕೆಲವು ಕ್ಷಣ ಸಭಾಂಗಣದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಯಿತು. ಎಂಡಿಎಫ್ ಕಾರ್ಯದರ್ಶಿ ಜಗದೀಶ್ ಗೌಡ ಮತ್ತು ಶ್ರೀಪಾದ ಹೆಗಡೆ ನಿಸರಾಣಿ ಅವರ ಮೇಲೆ ಹಲ್ಲೆ ನಡೆಸಲಾಗಿದೆ.