ಸಚಿವ ವಿ.ಸುನೀಲ್ ಕುಮಾರ್ ಅವರಿಂದ ರಂಗಾಯಣದ ಮ್ಯೂರಲ್ ಆರ್ಟ್ ಗ್ಯಾಲರಿ ಉದ್ಘಾಟನೆ

ಶಿವಮೊಗ್ಗ : ಹೊಸ ಪೀಳಿಗೆಯನ್ನು ರಂಗಭೂಮಿಯ ಕಡೆಗೆ ಸೆಳೆಯುವ ಕಾರ್ಯವನ್ನು ರಂಗಾಯಣಗಳು ಮಾಡಬೇಕು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಇಂಧನ ಖಾತೆ ಸಚಿವ ವಿ.ಸುನೀಲ್ ಕುಮಾರ್ ಹೇಳಿದರು. ಶಿವಮೊಗ್ಗ ರಂಗಾಯಣದ ಸುವರ್ಣ ಸಾಂಸ್ಕೃತಿಕ ಭವನದಲ್ಲಿನ ಮ್ಯೂರಲ್ ಆರ್ಟ್ ಗ್ಯಾಲರಿಯನ್ನು ಸಚಿವ ಸುನೀಲ್ ಕುಮಾರ್ ಉದ್ಘಾಟಿಸಿದರು.

ನಂತರ ಮಾತನಾಡಿದ ಅವರು, ಪೈಪೋಟಿಯ ಇಂದಿನ ಯುಗದಲ್ಲಿ ಯುವ ಜನರು ಸಾಮಾಜಿಕ ಜಾಲತಾಣಗಳಿಗೆ ಹೆಚ್ಚಾಗಿ ಮಾರು ಹೋಗುತ್ತಿದ್ದು, ಅಂತಹ ಯುವ ಜನರಲ್ಲಿ ರಂಗ ಆಸಕ್ತಿ ಮೂಡಿಸುವ ಕಾರ್ಯ ನಡೆಯಬೇಕು. ಶಿವಮೊಗ್ಗ ರಂಗಾಯಣದಲ್ಲಿ ರಚಿಸಲಾಗಿರುವ ಮ್ಯೂರಲ್ ಕಲಾಕೃತಿಗಳು ಬಹಳ ಆಕರ್ಷಕವಾಗಿವೆ.  ಬೇರೆ ಯಾವುದೇ ರಂಗಾಯಣಗಳು ಮಾಡದ ಕಾರ್ಯವನ್ನು ಶಿವಮೊಗ್ಗ ರಂಗಾಯಣ ಮಾಡಿದೆ ಎಂದು ಸಚಿವರು ಈ ಸಂದರ್ಭದಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದರು.

ರಂಗಾಯಣ ನಿರ್ದೇಶಕ ಸಂದೇಶ್ ಜವಳಿ, ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್, ಸಣ್ಣ ಕೈಗಾರಿಕಾ ಅಭಿವೃದ್ಧಿ ನಿಗಮದ ಉಪಾಧ್ಯಕ್ಷ ದತ್ತಾತ್ರಿ, ರಂಗ ಸಮಾಜದ ಸದಸ್ಯ ಹಾಲಸ್ವಾಮಿ, ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕ ಚಿದಾನಂದ ವಟಾರೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಉಮೇಶ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು.