ಹಾಫ್ ಹೆಲ್ಮೆಟ್ ನಿಮ್ಮ ಸಾವಿಗೆ ಕಾರಣವಾಗಬಹುದು!

ಬೆಂಗಳೂರು : ಯಾರ ಆಯಸ್ಸು ಎಲ್ಲಿವರೆಗೆ ಅಂತ ಯಾರಿಗೂ ಗೊತ್ತಿರಲ್ಲ. ಆದರೆ ಪ್ರತಿಯೊಬ್ಬರಿಗೂ ತಮ್ಮ ಜೀವದ ಬಗ್ಗೆ ಕಾಳಜಿ ಮುಖ್ಯ. ಬೈಕ್ ಅಪಘಾತದಲ್ಲಿ ಅದೆಷ್ಟೊ ಜನರ ಉಸಿರು ನಿಂತಿದೆ. ಹೀಗಾಗಿ ಬೈಕ್ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕೆಂದು ಕಾನೂನಿದೆ. ಆದರೆ ಈ ನಿಯಮದ ಕಾಳಜಿ ಕೆಲ ಜನರಿಗೆ ಇನ್ನೂ ಅರ್ಥವೇ ಆಗಿಲ್ಲ. ಹೀಗಾಗಿ ಬೇಕಾಬಿಟ್ಟಿ ಹೆಲ್ಮೆಟ್ ಧರಿಸದೇ ಓಡಾಡುತ್ತಾರೆ. ಇನ್ನು ಕೆಲವರು ದಂಡ ಕಟ್ಟುವುದನ್ನು ತಪ್ಪಿಸಲು ಹೆಲ್ಮೆಟ್ ಧರಿಸುತ್ತಾರೆ.

ಅದೇನೇಯಿರಲಿ, ಈ ಹೆಲ್ಮೆಟ್ ವಿಚಾರಕ್ಕೆ ಸಂಬಂಧಿಸಿ ನಿಮ್ಹಾನ್ಸ್ ಮತ್ತು ಪೊಲೀಸರು ನಡೆಸಿದ ಅಧ್ಯಯನದಲ್ಲಿ ಮಹತ್ವದ ಅಂಶಗಳು ಬೆಳಕಿಗೆ ಬಂದಿದೆ. ಹಾಫ್ ಹೆಲ್ಮೆಟ್ ಧರಿಸುವದರಿಂದ ಜೀವಕ್ಕೆ ಕುತ್ತು ತರುತ್ತದೆಂದು ಅಧ್ಯಯನದ ವೇಳೆ ತಿಳಿದುಬಂದಿದೆ. ಬೈಕ್ ಅಪಘಾತದ ಸಾವಿನ ಪ್ರಕರಣಗಳ ಅಂಕಿ ಅಂಶಗಳನ್ನ ಪರಿಶೀಲಿಸಿದ ವೇಳೆ ಈ ಸತ್ಯ ಬಯಲಾಗಿದೆ. ಅಪಘಾತದ ವೇಳೆ ಹಾಫ್ ಹೆಲ್ಮೆಟ್ನಿಂದಲೇ ಹೆಚ್ಚು ಸಾವಾಗುತ್ತಿವೆ ಎಂಬ ಅಂಶ ನಿಮ್ಹಾನ್ಸ್ ಮತ್ತು ಪೊಲೀಸರು ನಡೆಸಿದ ಅಧ್ಯಯನದಲ್ಲಿ ಬೆಳಕಿಗೆ ಬಂದಿದೆ. ಹಾಫ್ ಹೆಲ್ಮೆಟ್ ಹಾಕಿದಾಗ ಅದರ ಹಿಂಬದಿ, ಮೆದುಳ ಬಳ್ಳಿಯ ಬುಡಕ್ಕೆ ಹೊಡೆಯುತ್ತದೆ. ಈ ವೇಳೆ ಮೆದುಳ ಬಳ್ಳಿ ಅಲ್ಲೆ ಕಟ್ ಅಗುತ್ತದೆ. ಹೀಗಾಗಿ ಬೈಕ್ ಸವಾರರು ಘಟನಾ ಸ್ಥಳದಲ್ಲೇ ಸಾವಿಗೀಡಾಗುತ್ತಾರೆ ಎಂದು ಅಧ್ಯಯನದಲ್ಲಿ ತಿಳಿದುಬಂದಿದೆ.