ಎಲ್ಲಾ ವಿಧಾನಸಭಾ ಕ್ಷೇತ್ರದಲ್ಲಿಯೂ ಜಾನಪದ ಉತ್ಸವ ಆಯೋಜನೆ : ಸಿಎಂ 

ಬೆಂಗಳೂರು : ಪದ್ಮನಾಭನಗರದಲ್ಲಿ ಜಾನಪದ ಉತ್ಸವ ಅರ್ಥಪೂರ್ಣವಾಗಿ ನಡೆದಿದೆ. ಈ ಮೂಲಕ ನಮ್ಮ ಸಂಸ್ಕೃತಿಯನ್ನು ಪ್ರತಿಬಿಂಬಿಸಲಾಗಿದೆ. ಆದ್ದರಿಂದ ಮುಂದಿನ ದಿನಗಳಲ್ಲಿ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿಯೂ ಜಾನಪದ ಉತ್ಸವ ಹಮ್ಮಿಕೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ಪದ್ಮನಾಭನಗರ ಜಾನಪದ ಉತ್ಸವ-2022 ರ ಸಮಾರೋಪ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕರ್ನಾಟಕದಲ್ಲಿ ಜಾನಪದದಿಂದ ಕನ್ನಡ ಭಾಷೆ ಅತ್ಯಂತ ಶ್ರೀಮಂತವಾಗಿದೆ. ಭಾರತದಲ್ಲಿ ಕನ್ನಡಕ್ಕೆ ಅಗ್ರಮಾನ್ಯ ಸ್ಥಾನವನ್ನು ಯಾರೂ ತಪ್ಪಿಸಲು ಸಾಧ್ಯವಿಲ್ಲ. ಭಾರತದಲ್ಲಿ ಅತ್ಯಂತ ಪ್ರಾಚೀನ ಭಾಷೆ ಕನ್ನಡ. ಹಲವಾರು ಯುಗಗಳು ಕಳೆದರೂ ಕೂಡ ಕನ್ನಡ ಗಟ್ಟಿಯಾಗಿ ನಿಂತಿದೆ. ಇದರ ಬಗ್ಗೆ ಯಾರಿಗೂ ಅನುಮಾನ ಬೇಡ. ಕನ್ನಡ ಭಾಷೆಯ ಶಕ್ತಿ ಜಾನಪದದಿಂದ ಬರುತ್ತದೆ ಎಂದರು.