ಶಿವಮೊಗ್ಗ ಆಟೋ ಕಾಂಪ್ಲೆಕ್ಸ್‌ನಲ್ಲಿ ಅಗ್ನಿ ಅವಘಡ

ಶಿವಮೊಗ್ಗ : ಆಟೋ ಕಾಂಪ್ಲೆಕ್ಸ್‌ನಲ್ಲಿ ಭಾನುವಾರ ರಾತ್ರಿ ಅಗ್ನಿ ಅವಘಡ ಸಂಭವಿಸಿದೆ. ಈ ಘಟನೆಯಿಂದಾಗಿ ಮೂರು ಕಾರು ಸಂಪೂರ್ಣವಾಗಿ ಸುಟ್ಟು ಕರಕಲಾಗಿದ್ದು, ಬಸ್‌ವೊಂದಕ್ಕೆ ಭಾಗಶಃ ಹಾನಿಯಾಗಿದೆ.

ಆಟೋ ಕಾಂಪ್ಲೆಕ್ಸ್‌ನಲ್ಲಿ ನಿಲ್ಲಿಸಿದ ಕಾರೊಂದಕ್ಕೆ ಮೊದಲು ಬೆಂಕಿ ತಗುಲಿದೆ. ನಂತರ ಪಕ್ಕದಲ್ಲಿಯೇ ನಿಲ್ಲಿಸಿದ್ದ ಕಾರುಗಳು ಹಾಗೂ ಬಸ್‌ಗೆ ಬೆಂಕಿ ತಗುಲಿದೆ. ನಂತರ ಘಟನೆ ಕುರಿತಾಗಿ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ದೊಡ್ಡ ಅವಘಡ ತಪ್ಪಿಸಿದ್ದಾರೆ.

ಕಾರಿಗೆ ಬೆಂಕಿ ತಗುಲಲು ನಿಖರ ಕಾರಣ ಏನೆಂದು ಇನ್ನು ತಿಳಿದುಬಂದಿಲ್ಲ. ಆದ್ರೆ ಆಟೋ ಕಾಂಪ್ಲೆಕ್ಸ್ ಪಕ್ಕದಲ್ಲಿಯೇ ಇದ್ದ ಕಸದ ರಾಶಿಗೆ ಯಾರಾದರು ಬೆಂಕಿ ಹಚ್ಚಿರಬಹುದು. ನಂತರ ಆ ಬೆಂಕಿ ವಾಹನಗಳಿಗೆ ತಗುಲಿರಬಹುದು ಅಥವಾ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿರಬಹುದು ಎಂಬ ಅನುಮಾನಗಳು ವ್ಯಕ್ತವಾಗುತ್ತಿವೆ.