ಶಿವಮೊಗ್ಗ : ಮೀಸಲು ಅರಣ್ಯದ ಹೆಸರಿನಲ್ಲಿ ರೈತರು ಸಾಗುವಳಿ ಮಾಡಿಕೊಂಡಿರುವ ಜಮೀನನ್ನು ಅರಣ್ಯ ಇಲಾಖೆ ವ್ಯಾಪ್ತಿಗೆ ಒಳಪಡಿಸುವ ಕ್ರಮ ಸೂಕ್ತವಲ್ಲ. ರೈತರನ್ನು ಒಕ್ಕಲೆಬ್ಬಿಸುವ ಅರಣ್ಯ ಇಲಾಖೆ ಕ್ರಮಕ್ಕೆ ನನ್ನ ವಿರೋಧವಿದೆ ಎಂದು ಶಾಸಕ ಹರತಾಳು ಹಾಲಪ್ಪ ವಿರೋಧ ವ್ಯಕ್ತಪಡಿಸಿದ್ದಾರೆ.
ಅರಣ್ಯ ವ್ಯವಸ್ಥಾಪನಾ ಸಮಿತಿಯಿಂದ ಸಾಗರ ತಾಲೂಕಿನ ಚಿಕ್ಕನೆಲ್ಲೂರು ಗ್ರಾಮದಲ್ಲಿ ಏಪರ್ಡಿಸಿದ್ದ ರೈತರ ಅರ್ಜಿ ಪರಿಶೀಲನಾ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಹರತಾಳು ಹಾಲಪ್ಪ, ನೋಟಿಸ್ ನೀಡಿದ ಮಾತ್ರಕ್ಕೆ ರೈತರನ್ನು ಒಕ್ಕಲೆಬ್ಬಿಸುತ್ತಾರೆ ಎಂದು ಭಾವಿಸುವುದು ಬೇಡ. ಶೀಘ್ರದಲ್ಲಿ ಜಿಲ್ಲಾಧಿಕಾರಿ ಹಾಗೂ ಹಿರಿಯ ಅರಣ್ಯಾಧಿಕಾರಿಗಳನ್ನು ಕರೆಸಿ, ನೋಟಿಸ್ ನೀಡುತ್ತಿರುವ ಬಗ್ಗೆ ಚರ್ಚಿಸಲಾಗುವುದು. ಮೀಸಲು ಅರಣ್ಯಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದಲ್ಲಿ ತಿದ್ದುಪಡಿ ಆಗಬೇಕಿದೆ.
ಅಧಿವೇಶನ ಹಾಗೂ ಇನ್ನಿತರೆ ಸಂಧರ್ಭದಲ್ಲಿ ರಾಜ್ಯ ಸರ್ಕಾರದ ಮಟ್ಟದಲ್ಲಿ ಹಲವು ಬಾರಿ ಚರ್ಚಿಸಲಾಗಿದೆ. ಈ ಹಿಂದೆ ಕೇಂದ್ರ ಸಚಿವರನ್ನು ಭೇಟಿ ಮಾಡಿ ಚರ್ಚಿಸಿದ್ದೇವೆ. ಹೀಗಾಗಿ ರೈತರು ಯಾವುದೇ ಗೊಂದಲಕ್ಕೆ ಒಳಗಾಗಬರದು ಎಂದು ಹೇಳಿದರು. ಸಭೆಯಲ್ಲಿ ಮಾಜಿ ಸಚಿವ ಕಾಗೋಡು ತಿಮ್ಮಪ್ಪ, ಕೆಡಿಪಿ ಸದಸ್ಯ ದೇವೇಂದ್ರಪ್ಪ ಯಲಕುಂದ್ಲಿ ಹಾಗೂ ಮತ್ತಿತರರು ಉಪಸ್ಥಿತರಿದ್ದರು.