ಹೈಲೆಟ್ಸ್:
ಶಾಸಕ ಈಶ್ವರಪ್ಪ ಮದುವೆ ಆಗಲು ತಯಾರಾಗಿದ್ದಾರೆ
ತಾಳಿಯೂ ಇದೆ, ತಾಳಿ ಕಟ್ಟಲು ಬಿಡುತ್ತಿಲ್ಲ
ಮಾಜಿ ಶಾಸಕ ಗೋಪಾಲಕೃಷ್ಣ ಲೇವಡಿ
ಶಿವಮೊಗ್ಗ:
ಶಾಸಕ ಕೆ.ಎಸ್. ಈಶ್ವರಪ್ಪ ಮದುವೆ ಆಗಲು ತಯಾರಾಗಿದ್ದಾರೆ. ತಾಳಿಯೂ ಇದೆ. ಆದರೆ ತಾಳಿ ಕಟ್ಟಲು ಬಿಡುತ್ತಿಲ್ಲ ಎಂದು ಮಾಜಿ ಶಾಸಕ ಗೋಪಾಲಕೃಷ್ಣ ಬೇಳೂರು ಲೇವಡಿ ಮಾಡಿದ್ದಾರೆ. ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಗೋಪಾಲಕೃಷ್ಣ ಬೇಳೂರು, ಬಿಜೆಪಿ ವಿರುದ್ಧ ಮುಗಿ ಬಿದ್ದಿದ್ದಾರೆ. ರಾಜ್ಯ ಬಿಜೆಪಿಯಲ್ಲಿ ಭಿನ್ನಮತ ಶಿವಮೊಗ್ಗದಿಂದಲೇ ಶುರುವಾಗಲಿದೆ. ಬಿ.ಎಸ್.ಯಡಿಯೂರಪ್ಪ ಮತ್ತು ಅವರ ಮಕ್ಕಳ ವಿರುದ್ಧ ಬಿ.ಎಲ್.ಸಂತೋಷ್, ಕೆ.ಎಸ್.ಈಶ್ವರಪ್ಪ, ಸಿ.ಟಿ.ರವಿ ಪಿತೂರಿ ನಡೆಸುತ್ತಿದ್ದಾರೆ. ಒಟ್ಟಿನಲ್ಲಿ ಬಿಜೆಪಿಯಲ್ಲಿನ ಭಿನ್ನಮತದಿಂದಲೇ ಅಧಿಕಾರ ಕಳೆದುಕೊಳ್ಳಲಿದೆ ಎಂದು ಹೇಳಿದರು. ಇನ್ನೂ ರಾಜ್ಯದಲ್ಲಿ ಸರ್ಕಾರ ನಿದ್ದೆಗೆ ಜಾರಿದೆ. ಅಡಿಕೆ ದರ ಇಳಿಯುತ್ತಿದೆ. ಎಲೆ ಚುಕ್ಕಿ ರೋಗ ನಿಯಂತ್ರಣ ಸಾಧ್ಯವಾಗುತ್ತಿಲ್ಲ. ಅತಿವೃಷ್ಠಿಯಿಂದ ಉಂಟಾದ ಹಾನಿಗೆ ಪರಿಹಾರ ಕೊಟ್ಟಿಲ್ಲ. ಮನೆ ಕಳೆದುಕೊಂಡವರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಅತ್ಯಂತ ಕೆಟ್ಟ ಪರಿಸ್ಥಿತಿಯಲ್ಲಿ ರಾಜ್ಯ ಸರ್ಕಾರವಿದೆ ಎಂದು ದೂಷಿಸಿದರು.