ಶಿವಮೊಗ್ಗ : ಜಿಲ್ಲಾಡಳಿತ, ಸಮಾಜ ಕಲ್ಯಾಣ ಇಲಾಖೆ, ಮಹಾನಗರ ಪಾಲಿಕೆ ಹಾಗೂ ವಿವಿಧ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ಡಾ.ಬಾಬು ಜಗಜೀವನ ರಾಮ್ ಅವರ 115 ನೇ ಜನ್ಮ ದಿನಾಚರಣೆ ಆಚರಿಸಲಾಗಿದೆ.
ಮಹಾನಗರ ಪಾಲಿಕೆಯಿಂದ ಜಿಲ್ಲಾಧಿಕಾರಿ ಕಚೇರಿ ತನಕ ಮೆರವಣಿಗೆ ಮಾಡಲಾಯಿತು, ಬಳಿಕ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸಭಾ ಕಾರ್ಯಕ್ರಮ ನಡೆಯಿತು. ಈ ವೇಳೆ ನಿಗದಿತ ಸಮಯಕ್ಕಿಂತ ಕಾರ್ಯಕ್ರಮ ಆರಂಭಿಸಲು ವಿಳಂಬವಾಯಿತು. ಆದ್ದರಿಂದ ಕೆಲ ದಲಿತ ಮುಖಂಡರು ಜಿಲ್ಲಾಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ದಿಕ್ಕಾರ ಕೂಗಿದರು.
ಬಳಿಕ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಆಗಮನದ ಬೆನ್ನೆಲ್ಲೆ ಗಲಾಟೆ ತಣ್ಣಗಾಗಿ ಕಾರ್ಯಕ್ರಮ ಆರಂಭವಾಯಿತು. ಈ ವೇಳೆ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಸಚಿವರು, ಇಂಥಹ ಒಬ್ಬ ಪ್ರತಿಭಾವಂತ ಈ ದೇಶದ ಪ್ರಧಾನಿಯಾಗಲಿಲ್ಲ ಎನ್ನುವ ನೋವು ಪ್ರತಿ ವರ್ಷವೂ ನನ್ನನ್ನು ಕಾಡುತ್ತದೆ. ಈ ದೇಶದಲ್ಲಿ ಮೇಲು ಕೀಳು ಎಂಬ ಭೇದ ಭಾವ ಯಾವಾಗ ಹೋಗಿ, ಯಾವಾಗ ನಾವೆಲ್ಲ ಒಂದು ಎಂದು ಹೇಳ್ತೇವೋ ನಮಗೆ ಸ್ವಾತಂತ್ರ್ಯ ಸಿಕ್ಕ ಹಾಗೆ ಎಂದ ಅವರು ಹೇಳಿದ್ದರು ಎಂದು ಡಾ.ಬಾಬು ಜಗಜೀವನ ರಾಮ್ ಅವರ ಮಾತುಗಳನ್ನು ಸಚಿವರು ನೆನೆದರು.