ಶಿವಮೊಗ್ಗ : ನಿರಂತರ ಜ್ಯೋತಿ ಯೋಜನೆ ಅನುಷ್ಠಾನದಲ್ಲಿ ಮೆಸ್ಕಾಂನ ಶಿವಮೊಗ್ಗ ವ್ಯಾಪ್ತಿಯಲ್ಲಿ ಭಾರೀ ಅವ್ಯವಹಾರಗಳು ನಡೆದಿವೆ. ಇದೀಗ ಅನುಷ್ಠಾನದಲ್ಲಿನ ಲೋಪಗಳ ಬಗ್ಗೆ ತನಿಖೆ ನಡೆಸೋದಕ್ಕೆ ಇಂಧನ ಇಲಾಖೆ ಸಮಿತಿ ರಚನೆ ಮಾಡಿದೆ. ಅಲ್ಲದೆ 30 ದಿನಗಳ ಒಳಗೆ ವರದಿ ನೀಡಲು ಆ ಸಮಿತಿಗೆ ಸೂಚನೆ ನೀಡಿದೆ.
ಸಮಿತಿಯಲ್ಲಿ ಮೂರು ಜನರು ಇದ್ದು, ಪ್ರಸರಣ ವಿಭಾಗದ ನಿವೃತ್ತ ನಿರ್ದೇಶಕ ಕೆ.ವಿ.ಶಿವಕುಮಾರ್, ತಾಂತ್ರಿಕ ವಿಭಾಗದ ಮ್ಯಾನೇಜರ್ ಬಿ.ಆರ್.ಮಂಜುನಾಥ್, ಕೆಪಿಟಿಸಿಎಲ್ ನಿಯಂತ್ರಣಾಧಿಕಾರಿ ಕೆ.ಜಿ.ಅನಿತಾ ತನಿಖಾ ಸಮಿತಿಯ ಸದಸ್ಯರಾಗಿದ್ದಾರೆ. ಇಂಧನ ಸಚಿವ ವಿ.ಸುನೀಲ್ ಕುಮಾರ್ ಶಿವಮೊಗ್ಗದಲ್ಲಿ ಮೀಟಿಂಗ್ ನಡೆಸಿದ ವೇಳೆ ಸಚಿವ ಕೆ.ಎಸ್.ಈಶ್ವರಪ್ಪ, ಯೋಜನೆಯಲ್ಲಿನ ಅವ್ಯವಹಾರ, ನಡೆದಿರುವ ನ್ಯೂನತೆಗಳ ಬಗ್ಗೆ ಗಮನಕ್ಕೆ ತಂದಿದ್ದರು.
ಈಗಾಗಲೇ ಕರ್ತವ್ಯ ಲೋಪದ ಹಿನ್ನೆಲೆಯಲ್ಲಿ ಭದ್ರಾವತಿ ಗ್ರಾಮೀಣ ಉಪ ವಿಭಾಗದ ಘಟಕ 1ರ ಕಿರಿಯ ಎಂಜಿನಿಯರ್ ಕೆ.ಬಾಲಕೃಷ್ಣ, ಎಂಆರ್‌ಟಿ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ಆರ್.ಮದನ್ ಎಂಬುವವರನ್ನು ಅಮಾನತು ಮಾಡಲಾಗಿದೆ. ಕೇವಲ ಇಬ್ಬರು ಅಧಿಕಾರಿಗಳನ್ನು ಅಮಾನತು ಮಾಡಿದ್ದು ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ಈಗ ನೇಮಕ ಮಾಡಿರುವ ಸಮಿತಿಯಿಂದ ಅದೆಷ್ಟು ಕರ್ಮಕಾಂಡ ಹೊರ ಬರುತ್ತೋ ಕಾದು ನೋಡಬೇಕು.