ಭದ್ರಾವತಿ: ಬಿಜೆಪಿ ಯುವ ಮೋರ್ಚಾ ಘಟಕದ ವತಿಯಿಂದ ನರೇಂದ್ರ ಮೋದಿಯವರ ೭೧ನೇ ಜನ್ಮದಿನಾಚರಣೆಯ ಅಂಗವಾಗಿ ಸೇವಾ ಮತ್ತು ಸಮರ್ಪಣಾ ಅಭಿಯಾನದ ಭಾಗವಾಗಿ ಆಯೋಜಿಸಲಾಗಿದ್ದ ರಕ್ತದಾನ ಶಿಬಿರವನ್ನು ಕೆಎಸ್‌ಎಸ್‌ಐಡಿಸಿಯ ಉಪಾಧ್ಯಕ್ಷ ಎಸ್.ದತ್ತಾತ್ರಿ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಯುವ ಮೋರ್ಚಾದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ನರೇಂದ್ರ ಮೋದಿಯವರ ಸಾಧನೆ ಹಾಗೂ ಅವರ ಮುಂದಿರುವ ಸವಾಲುಗಳ ಬಗ್ಗೆ ಸವಿಸ್ತಾರವಾಗಿ ತಿಳಿಸಿ, ಅವರಿಗೆ ಜನ್ಮದಿನದ ಶುಭಾಶಯಗಳನ್ನು ಕೋರಿದ್ರು.
ಮನುಷ್ಯನು ಬದುಕಲು ರಕ್ತ ಅತ್ಯವಶ್ಯಕ. ರಕ್ತವನ್ನು ಯಾವುದೇ ಫ್ಯಾಕ್ಟರಿ ಅಥವಾ ಯಾವುದೇ ರಿಸರ್ಚ್ ಲ್ಯಾಬೋರೇಟರಿಗಳಲ್ಲಿ ತಯಾರಿಸಲು ಸಾಧ್ಯವಿಲ್ಲ. ರಕ್ತಕ್ಕೆ ಪರ್ಯಾಯವಾದಂತಹದ್ದು ಇನ್ನೊಂದಿಲ್ಲ. ಹಾಗಾಗಿ ರಕ್ತವನ್ನ ಮನುಷ್ಯನಿಂದಲೇ ಪಡೆದುಕೊಳ್ಳಬೇಕಾಗಿದೆ. ಒಬ್ಬ ಮನುಷ್ಯನ ೧ ಯೂನಿಟ್ ರಕ್ತ ೩ ಜನರ ಪ್ರಾಣ ಉಳಿಸುತ್ತದೆ. ಮನುಷ್ಯನ ರಕ್ತವು ಸಂಜೀವಿನಿಯ ಸ್ವರೂಪವಾಗಿದ್ದು, ರಕ್ತದಾನವು ಒಂದು ಪುಣ್ಯದ ಕಾರ್ಯವಾಗಿದೆ ಎಂದರು.
ಭದ್ರಾವತಿ ಯುವ ಮೋರ್ಚಾ ಘಟಕವು ನರೇಂದ್ರ ಮೋದಿಯವರ ೭೧ನೇ ಹುಟ್ಟುಹಬ್ಬದ ಪ್ರಯುಕ್ತ ೭೧ ಯೂನಿಟ್ ರಕ್ತವನ್ನು ದಾನ ಮಾಡಲು ತೀರ್ಮಾನಿಸಿದೆ. ಅದರಂತೆ ಭದ್ರಾವತಿ ಕ್ಷೇತ್ರದ ಎಲ್ಲಾ ಮಹಾಶಕ್ತಿ ಕೇಂದ್ರಗಳಲ್ಲೂ ಕೂಡಾ ಮುಂದಿನ ದಿನಗಳಲ್ಲಿ ರಕ್ತದಾನ ಶಿಬಿರಗಳನ್ನು ಆಯೋಜಿಸುವ ಮೂಲಕ ರಕ್ತದ ಅವಶ್ಯಕತೆ ಇರುವ ರೋಗಿಗಳನ್ನು ಬದುಕಿಸುವ ಒಂದು ಪುಣ್ಯದ ಕಾರ್ಯದಲ್ಲಿ ಭಾಗಿಯಾಗಬೇಕೆಂದು ತಿಳಿಸಿದರು.