ಶಿಕಾರಿಪುರ : ಒಬ್ಬ ರಾಜಕಾರಣಿಯ ಕಣ್ಣು ಮುಂದಿನ ಚುನಾವಣೆಯ ಮೇಲೆ ಇರುತ್ತದೆ. ಆದರೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರಂತಹ ಮುತ್ಸದ್ಧಿಯ ಕಣ್ಣು ಮುಂದಿನ ಭವಿಷ್ಯದ ಜನಾಂಗದ ಮೇಲೆ ಇರುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಯಿ ಹೇಳಿದರು.
ಶಿಕಾರಿಪುರದಲ್ಲಿ ಮಾಜಿ ಸಿಎಂ ಯಡಿಯೂರಪ್ಪನವರ ರೈತಾಭಿಮಾನ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಅವರು, ನನ್ನ ನಾಯಕರು, ರೈತ ನಾಯಕರು. ಸತ್ಯ, ಸ್ವಾಭಿಮಾನಕ್ಕಾಗಿ ನಿರಂತರ ಹೋರಾಟ, ಚಳವಳಿ ನಡೆಸಿದ ಧೀಮಂತ ನಾಯಕ ಯಡಿಯೂರಪ್ಪನವರು ಎಂದು ಕೊಂಡಾಡಿದರು. ರೈತರ ಬೆವರು ಮತ್ತು ಯಡಿಯೂರಪ್ಪ ಅವರ ನೀರು ಕೂಡಿದರೆ ಬಂಗಾರದ ಬೆಳೆ ಬೆಳೆಯಬಹುದು. ಆ ಕಾಲ ಶಿಕಾರಿಪುರಕ್ಕೆ ಬಂದಿದೆ. ಯಡಿಯೂರಪ್ಪ ಅವರ ಸಾಮಾಜಿಕ ಚಿಂತನೆಯಿಂದಾಗಿ ಹಲವಾರು ಯೋಜನೆಗಳನ್ನು ಕೊಟ್ಟಿದ್ದಾರೆ. ಅವೆಲ್ಲವೂ ಸಮಾಜದ ಕಟ್ಟಕಡೆಯವರಿಗೂ ಮುಟ್ಟಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.