ಕೊರೊನಾ ಲಕ್ಷಣ ಕಂಡು ಬರುವ ವಿದ್ಯಾರ್ಥಿಗಳಿಗೆ ಹಾಜರಾತಿ ಕಡ್ಡಾಯ ಮಾಡಬೇಡಿ - ಡಿಸಿ ಸೂಚನೆ 

ಶಿವಮೊಗ್ಗ : ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಕೋವಿಡ್ ಹರಡದಂತೆ ನಿಗಾ ವಹಿಸಬೇಕು ಎಂದು ಜಿಲ್ಲಾಧಿಕಾರಿ ಡಾ. ಆರ್.ಸೆಲ್ವಮಣಿ ಸೂಚಿಸಿದ್ದಾರೆ. ಜಿಲ್ಲಾಧಿಕಾರಿ ಕಚೇರಿಯಲ್ಲಿ ವಿವಿಧ ಇಲಾಖೆ ಅಧಿಕಾರಿಗಳ ಸಭೆ ನಡೆಸಿದ ಜಿಲ್ಲಾಧಿಕಾರಿ, ಕೋವಿಡ್ ನಿಯಂತ್ರಣಕ್ಕೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಸೂಚನೆಗಳನ್ನು ನೀಡಿದರು. ಜಿಲ್ಲೆಯಲ್ಲಿ ಈವರೆಗೆ ಪ್ರಾಥಮಿಕ ಶಾಲಾ ಹಂತದ 115 ವಿದ್ಯಾರ್ಥಿಗಳು ಹಾಗೂ 26 ಶಿಕ್ಷಕರು ಕೋವಿಡ್ ಪಾಸಿಟಿವ್ ಆಗಿದ್ದಾರೆ. ಇದೇ ರೀತಿ ಕಾಲೇಜು ಹಂತದ 35ವಿದ್ಯಾರ್ಥಿಗಳು ಹಾಗೂ 6 ಶಿಕ್ಷಕರು ಪಾಸಿಟಿವ್ ಆಗಿದ್ದು, ೫ ಶಾಲೆಗಳು ಹಾಗೂ ೪ ಕಾಲೇಜುಗಳನ್ನು ಒಂದು ವಾರದ ಮಟ್ಟಿಗೆ ತಾತ್ಕಾಲಿಕವಾಗಿ ಸೀಲ್‌ಡೌನ್ ಮಾಡಲಾಗಿದೆ.

ಪ್ರತಿದಿನ ಶಾಲಾ ಕಾಲೇಜು ಆರಂಭಕ್ಕೆ ಮೊದಲು ಕಡ್ಡಾಯವಾಗಿ ವಿದ್ಯಾರ್ಥಿಗಳ ಟೆಂಪರೇಚರ್ ತಪಾಸಣೆ ನಡೆಸಬೇಕು. ಜ್ವರದ ಲಕ್ಷಣ ಇರುವ ವಿದ್ಯಾರ್ಥಿಗಳನ್ನು ಮನೆಗೆ ಕಳುಹಿಸಬೇಕು. ಹಾಗೂ ವಿದ್ಯಾರ್ಥಿಗಳ ಮನೆಯಲ್ಲಿ ಯಾರಿಗಾದರೂ ಸಹ ರೋಗ ಲಕ್ಷಣಗಳು ಇದ್ದರೂ ಅಂತಹ ವಿದ್ಯಾರ್ಥಿಗಳಿಗೆ ಕೂಡ ಹಾಜರಾತಿ ಕಡ್ಡಾಯಗೊಳಿಸಬಾರದು ಎಂದು ಜಿಲ್ಲಾಧಿಕಾರಿ ಡಾ. ಆರ್.ಸೆಲ್ವಮಣಿ ತಿಳಿಸಿದ್ದಾರೆ. ಸಭೆಯಲ್ಲಿ ಜಿಲ್ಲಾ ಪಂಚಾಯತ್ ಸಿಇಒ ಎಂ.ಎಲ್.ವೈಶಾಲಿ, ಎಡಿಸಿ ಡಾ. ನಾಗೇಂದ್ರ ಹೊನ್ನಳ್ಳಿ, ಮಹಾನಗರ ಪಾಲಿಕೆ ಆಯುಕ್ತ ಚಿದಾನಂದ ವಟಾರೆ ಹಾಗೂ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.