ಶಿವಮೊಗ್ಗ : ಆನವಟ್ಟಿಯಲ್ಲಿ ನಾಟಕ ಪ್ರದರ್ಶನ ರದ್ದುಗೊಳಿಸಿದ ಪ್ರಕರಣವನ್ನು ಖಂಡಿಸಿ ಶಿವಮೊಗ್ಗ ಜಿಲ್ಲಾಧಿಕಾರಿ ಕಚೇರಿ ಎದುರು ಕಲಾವಿದರು, ಸಾಹಿತಿಗಳು, ಚಿಂತಕರು ಪ್ರತಿಭಟನೆ ನಡೆಸಿದರು.
ಹವ್ಯಾಸಿ ರಂಗತಂಡಗಳ ಕಲಾವಿದರ ಸಂಘವಾದ ಕಲಾವಿದರು ಒಕ್ಕೂಟದ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ, ನಾಟಕ ನಡೆಯುತ್ತಿರುವಾಗ ವೇದಿಕೆಯ ಮೇಲೆ ನುಗ್ಗಿರುವುದು, ನಾಟಕ ನಿಲ್ಲಿಸದಿದ್ದರೆ ಕಲಾವಿದರನ್ನು ವೇದಿಕೆಯಿಂದ ದಬ್ಬುತ್ತೇವೆ ಎಂದು ಬೆದರಿಸಿರುವುದು ಒಂದು ಅಪರಾಧಿಕ ಕೃತ್ಯವಾಗಿದೆ. ಪೊಲೀಸ್‌ಇಲಾಖೆಯು ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು ತನಿಖೆ ನಡೆಸುವಂತೆ ಒತ್ತಾಯಿಸಿದರು.
ಜುಲೈ ೩ರಂದು ಸಂಜೆ ಆನವಟ್ಟಿಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಶಿವಮೊಗ್ಗದ ರಂಗಬೆಳಕು ತಂಡವು ಜಯಂತ್ ಕಾಯ್ಕಿಣಿ ಅವರ ಜೊತೆಗಿರುವನು ಚಂದಿರ ನಾಟಕ ಪ್ರದರ್ಶನ ನಡೆಸುವ ಸಂದರ್ಭದಲ್ಲಿ ಕೆಲವು ಕಿಡಿಗೇಡಿಗಳು ಈ ಕೃತ್ಯ ಎಸಗಿದ್ದಾರೆ. ಈ ಪ್ರಕರಣವನ್ನು ಸರ್ಕಾರವು ಗಂಭೀರವಾಗಿ ಪರಿಗಣಿಸಿ, ಕ್ರಮ ಕೈಗೊಳ್ಳಬೇಕು ಅಂತ ಒತ್ತಾಯಿಸಿದ್ದಾರೆ.
ಪ್ರತಿಭಟನೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಡಿ. ಮಂಜುನಾಥ್, ಸಾಹಿತಿಗಳಾದ ಪ್ರೊ. ರಾಜೇಂದ್ರ ಚೆನ್ನಿ, ಅಕ್ಷತಾ ಹುಂಚದಕಟ್ಟೆ, ಪ್ರಭಾಕರನ್ ಸೇರಿದಂತೆ ಹಲವರಿದ್ದರು.